ಮಂಗಳೂರು, ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ಅದರ ಎದುರು ಭಾಗದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಮತ್ತು ವಾಹನ ದಟ್ಟಣೆ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ ಎಂದು ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘ (ರಿ.) ಮಂಗಳೂರು ಅಧ್ಯಕ್ಷ ಅಝೀಝ್ ಪರ್ತಿಪಾಡಿ ಆರೋಪಿಸಿದರು.
ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಎದುರು ನಾಲ್ಕು ದಿಕ್ಕುಗಳಿಂದ ರಸ್ತೆ ಸಂಪರ್ಕವಿದ್ದರೂ, ಸಮರ್ಪಕ ಸರ್ಕಲ್ ಅಥವಾ ಸಂಚಾರ ನಿಯಂತ್ರಣ ವ್ಯವಸ್ಥೆ ಇಲ್ಲದ ಕಾರಣ ವಾಹನ ದಟ್ಟಣೆ ಹೆಚ್ಚಾಗುತ್ತಿದೆ ಎಂದು ಹೇಳಿದರು.
ಕಿರಿದಾದ ರಸ್ತೆಯಲ್ಲಿ ವಾಹನ ಸಂಚಾರ ನಡೆಸುವುದೇ ಕಷ್ಟಕರವಾಗಿದ್ದು, ಪ್ರಯಾಣಿಕರು ನಿತ್ಯ ತೊಂದರೆ ಅನುಭವಿಸುವಂತಾಗಿದೆ. ವಿಶೇಷವಾಗಿ ಬಿಜೈ ಭಾಗಕ್ಕೆ ತೆರಳುವ ಪ್ರಯಾಣಿಕರಿಗೆ ಸಮರ್ಪಕ ಬಸ್ ಬೇ ಅಥವಾ ಬಸ್ ನಿಲ್ದಾಣದ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ ಎಂದು ದೂರಿದರು.
ಸಾರ್ವಜನಿಕರು ರಸ್ತೆಯಲ್ಲೇ ನಿಂತು ಬಸ್ ಏರಿಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಳೆಗಾಲದಲ್ಲಿ ಸಮಸ್ಯೆ ಇನ್ನಷ್ಟು ದುಸ್ತರವಾಗುತ್ತದೆ. ಸುಮಾರು ಒಂದು ರಿಂದ ಒಂದೂವರೆ ಅಡಿ ನೀರಿನಲ್ಲಿ ನಿಂತುಕೊಂಡೇ ಬಸ್‌ಗಾಗಿ ಕಾಯಬೇಕಾದ ಅನಿವಾರ್ಯತೆ ಎದುರಾಗುತ್ತಿದೆ ಎಂದು ಹೇಳಿದರು.
ಮಹಿಳೆಯರು, ಮಕ್ಕಳು ಹಾಗೂ ವಯೋವೃದ್ಧರು ಹೆಚ್ಚಿನ ಸಂಕಷ್ಟ ಅನುಭವಿಸುತ್ತಿದ್ದು, ಸಂಬಂಧಪಟ್ಟ ಇಲಾಖೆ ತಕ್ಷಣ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಕೇಂದ್ರ ಬಸ್ ನಿಲ್ದಾಣದಲ್ಲಿಯೂ ಮೂಲಭೂತ ಸೌಕರ್ಯಗಳ ಕೊರತೆ ಕಂಡುಬರುತ್ತಿದೆ ಎಂದು ಅವರು ಆರೋಪಿಸಿದರು. ಪ್ರಯಾಣಿಕರಿಗಾಗಿ ಸಮರ್ಪಕ ಆಸನ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ ಹಾಗೂ ಸ್ವಚ್ಛ ಶೌಚಾಲಯಗಳ ವ್ಯವಸ್ಥೆ ಇಲ್ಲದಿರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.
ಮಕ್ಕಳನ್ನು ಕೈಯಲ್ಲಿ ಹಿಡಿದುಕೊಂಡ ಮಹಿಳೆಯರು ಹಾಗೂ ವಯೋವೃದ್ಧರು ಗಂಟೆಗಟ್ಟಲೆ ನಿಂತೇ ಬಸ್‌ಗಾಗಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಕೂಡಲೇ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲಾರ್, ಸದಸ್ಯರಾದ ರಾಮಚಂದ್ರ ನಾಯಕ್ ಹಾಗೂ ದಿಲ್ರಾಜ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.