ಮಂಗಳೂರು, ಮೇ 23: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಆರಂಭವಾಗಿರುವ ಹಿನ್ನೆಲೆಯಲ್ಲಿ ರಸ್ತೆ ಹಾಗೂ ಹೆದ್ದಾರಿಗಳಲ್ಲಿ ಗ್ರೀಸ್, ಆಯಿಲ್, ಡೀಸೆಲ್ ಸೇರಿದಂತೆ ಜಾರುವ ಪದಾರ್ಥಗಳಿಂದ ಅಪಘಾತಗಳ ಸಾಧ್ಯತೆ ಹೆಚ್ಚಿರುವುದರಿಂದ ವಾಹನ ಚಾಲಕರು ಮತ್ತು ಪ್ರಯಾಣಿಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕೆಂದು ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘ (ರಿ.) ಮಂಗಳೂರು ಮನವಿ ಮಾಡಿದೆ.
ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪಾಡಿ, ಮಳೆಯ ಸಮಯದಲ್ಲಿ ರಸ್ತೆಗಳಲ್ಲಿ ಹೊಂಡಗಳು, ಜಾರಿ ಪ್ರದೇಶಗಳು ಹಾಗೂ ಇತರೆ ಅಡೆತಡೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಚಾಲಕರು ಅತಿ ವೇಗ ಮತ್ತು ಅಜಾಗರೂಕತೆಯನ್ನು ತೊರೆದು ಸುರಕ್ಷಿತ ಚಾಲನೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರನ್ನು ಹತ್ತಿಸುವ ಮತ್ತು ಇಳಿಸುವ ಸಂದರ್ಭಗಳಲ್ಲಿ ಚಾಲಕರು ಹಾಗೂ ನಿರ್ವಾಹಕರು ವಿಶೇಷ ಜಾಗ್ರತೆ ವಹಿಸಬೇಕು. ವಿದ್ಯಾರ್ಥಿಗಳ ಬಳಿ ‘ಚಲೋ ಕಾರ್ಡ್’ ಇದ್ದಲ್ಲಿ ಅದನ್ನು ಮಾನ್ಯಗೊಳಿಸಿ, ನಿರ್ವಾಹಕರು ಸೌಜನ್ಯದಿಂದ ವರ್ತಿಸಬೇಕು ಎಂದು ತಿಳಿಸಿದರು.
ಪ್ರಯಾಣಿಕರು, ವಿಶೇಷವಾಗಿ ವಿದ್ಯಾರ್ಥಿಗಳು, ಬಸ್ಗೆ ಹತ್ತುವಾಗ ಮತ್ತು ಇಳಿಯುವಾಗ ಎಚ್ಚರಿಕೆ ವಹಿಸಬೇಕೆಂದು ಮನವಿ ಮಾಡಿದ ಅವರು, ಪ್ರಯಾಣಿಕರೂ ಚಾಲಕರು ಹಾಗೂ ನಿರ್ವಾಹಕರೊಂದಿಗೆ ಸಹಕಾರದಿಂದ ನಡೆದುಕೊಳ್ಳಬೇಕು ಎಂದರು.
ಆರ್ಟಿಒ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚು ಅಥವಾ ಕಡಿಮೆ ದರದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವುದು ಸರಿಯಲ್ಲ. ಸರ್ಕಾರ ಹಾಗೂ ಆರ್ಟಿಒ ನಿಗದಿಪಡಿಸಿದ ದರದಲ್ಲಿಯೇ ಟಿಕೆಟ್ ನೀಡಬೇಕು. ಯಾವುದೇ ರೀತಿಯ ಹೆಚ್ಚುವರಿ ದರ ವಸೂಲಿ ಅಥವಾ ಅನಧಿಕೃತ ರಿಯಾಯಿತಿ ನೀಡಬಾರದು ಎಂದು ಹೇಳಿದರು.
ಖಾಸಗಿ ಸಾರಿಗೆ ಕ್ಷೇತ್ರ ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳ ಬಗ್ಗೆ ಮಾತನಾಡಿದ ಅವರು, ಡೀಸೆಲ್ ದರ ಏರಿಕೆ, ಟಯರ್, ಬಿಡಿಭಾಗಗಳು, ಆಯಿಲ್, ಬ್ಯಾಟರಿ, ಚಾಸಿ ಹಾಗೂ ಬಾಡಿ ಬಿಲ್ಡಿಂಗ್ ವೆಚ್ಚಗಳು ಶೇ.20ರಿಂದ 30ರವರೆಗೆ ಹೆಚ್ಚಳವಾಗಿದೆ ಎಂದು ತಿಳಿಸಿದರು.
ಪ್ರತಿ ಮೂರು ತಿಂಗಳಿಗೆ ಸೀಟೊಂದಕ್ಕೆ ₹1,000ರಂತೆ ತೆರಿಗೆ ಪಾವತಿಸಬೇಕಾಗಿದ್ದು, 50 ಸೀಟಿನ ಬಸ್ಗೆ ₹50,000 ತೆರಿಗೆ ಕಟ್ಟಬೇಕಾಗಿದೆ. ವಾರ್ಷಿಕ ಇನ್ಸೂರೆನ್ಸ್ ಪ್ರೀಮಿಯಂ ₹1 ಲಕ್ಷದಿಂದ ₹1.5 ಲಕ್ಷದವರೆಗೆ ತಲುಪಿದ್ದು, ಮಾಸಿಕ ಇಎಂಐ ₹50,000ರಿಂದ ₹60,000ರವರೆಗೆ ಇದೆ ಎಂದು ವಿವರಿಸಿದರು.
2021ರಲ್ಲಿ ಕೊನೆಯದಾಗಿ ಬಸ್ ದರ ಪರಿಷ್ಕರಣೆ ಮಾಡಲಾಗಿದ್ದು, ಕಳೆದ ಐದು ವರ್ಷಗಳಿಂದ ಯಾವುದೇ ದರ ಏರಿಕೆ ಮಾಡಿಲ್ಲ. ಜಾಗತಿಕ ತೈಲ ಮಾರುಕಟ್ಟೆಯ ಏರಿಳಿತದಿಂದ ಡೀಸೆಲ್ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದ್ದರೂ, ಶಾಲೆಗಳು ಆರಂಭವಾಗುತ್ತಿರುವ ಹಿನ್ನೆಲೆ ಸಾರ್ವಜನಿಕರ ಹಿತದೃಷ್ಟಿಯಿಂದ ತಕ್ಷಣ ಯಾವುದೇ ದರ ಏರಿಕೆ ಮಾಡುವುದಿಲ್ಲ ಎಂದು ಖಾಸಗಿ ಸಾರಿಗೆ ವಲಯ ಸ್ಪಷ್ಟಪಡಿಸಿದೆ.
ಮುಂದಿನ ಒಂದು ತಿಂಗಳ ಕಾಲ ಡೀಸೆಲ್ ದರ ಮತ್ತು ಪರಿಸ್ಥಿತಿಯನ್ನು ಅವಲೋಕಿಸಿ, ಸಾರ್ವಜನಿಕರಿಗೆ ಹೊರೆಯಾಗದ ರೀತಿಯಲ್ಲಿ ವೈಜ್ಞಾನಿಕ ಪರಿಶೀಲನೆಯ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲಾರ್, ಸದಸ್ಯರಾದ ರಾಮಚಂದ್ರ ನಾಯಕ್ ಹಾಗೂ ದಿಲ್ರಾಜ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.