ಹಸಿರು ವಲಯ ನಿರ್ಮಾಣ, ಪುನರ್ವಸತಿಗೆ ಆಗ್ರಹಿಸಿ 6ನೇ ದಿನಕ್ಕೂ ಧರಣಿ ಮುಂದುವರಿಕೆ
ಮಂಗಳೂರು: ಎಂಆರ್ಪಿಎಲ್ನ ಕೋಕ್ ಸಲ್ಪರ್ ಘಟಕದಿಂದ ಉಂಟಾಗುತ್ತಿರುವ ಗಂಭೀರ ಮಾಲಿನ್ಯ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಜೋಕಟ್ಟೆ, ಕೆಂಜಾರು ಹಾಗೂ ಕಳವಾರು ಭಾಗದ ಗ್ರಾಮಸ್ಥರು ನಡೆಸುತ್ತಿರುವ ಹಗಲು-ರಾತ್ರಿ ಧರಣಿ ಆರನೇ ದಿನಕ್ಕೂ ಮುಂದುವರಿದಿದೆ.
ಕೋಕ್ ಸಲ್ಪರ್ ಘಟಕದ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ನಾಗರಿಕ ಹೋರಾಟ ಸಮಿತಿ, ಜನವಸತಿ ಪ್ರದೇಶದಲ್ಲಿ ತಕ್ಷಣ ಹಸಿರು ವಲಯ ನಿರ್ಮಾಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಬೇಕು ಹಾಗೂ ಸಂತ್ರಸ್ತರಿಗೆ ಪುನರ್ವಸತಿ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದೆ.
“ಹಸಿರು ವಲಯಕ್ಕಾಗಿ ಭೂಸ್ವಾಧೀನ ಮತ್ತು ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈಗಾಗಲೇ ತೀರ್ಮಾನ ಕೈಗೊಂಡಿದ್ದರೂ ಅದು ಜಾರಿಗೆ ಬಂದಿಲ್ಲ. ನಮ್ಮ ಬೇಡಿಕೆ ಈಡೇರುವವರೆಗೆ ಹೋರಾಟ ನಿಲ್ಲುವುದಿಲ್ಲ” ಎಂದು ಪ್ರತಿಭಟನಾನಿರತರು ಎಚ್ಚರಿಕೆ ನೀಡಿದ್ದಾರೆ.
ಕೋಕ್ ಸಲ್ಪರ್ ಘಟಕದಿಂದ ಹೊರಬರುವ ದುರ್ವಾಸನೆ ಮತ್ತು ಮಾಲಿನ್ಯದಿಂದ ಸ್ಥಳೀಯ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.