ಮಂಜೇಶ್ವರ: ಹೊಸದುರ್ಗ ಪೊಲೀಸ್ ಠಾಣೆಯ ವಾರಂಟ್ ಆರೋಪಿಯನ್ನು ಬಂಧಿಸಲು ಉಪ್ಪಳ ಮಣಿಮಂಡಕ್ಕೆ ತೆರಳಿದ್ದ ಪೊಲೀಸ್ ತಂಡದ ಮೇಲೆ ಹಲ್ಲೆ ನಡೆಸಿ, ಆರೋಪಿಯನ್ನು ಬಿಡಿಸಿಕೊಂಡು ಹೋದ ಆರೋಪಿಯನ್ನು ಹರಸಾಹಸ ಪಟ್ಟು ಪೋಲೀಸರು ಬಂಧಿಸಿದ್ದಾರೆ.
ಹೊಸದುರ್ಗ ಪೊಲೀಸ್ ಠಾಣೆಯ ಕೇಸೊಂದಕ್ಕೆ ಸಂಬಂಧಿಸಿದಂತೆ ಸುಹೈಲ್ ಎಂಬಾತನನ್ನು ಬಂಧಿಸಲು ಕಾಸರಗೋಡಿನಿಂದ ಪೊಲೀಸ್ ತಂಡ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ವಿಶೇಷ ದಳ ತೆರಳಿತ್ತು. ಈತ ಮಂಗಳೂರಿನ ಕೆ.ಸಿ. ರೋಡ್ನಲ್ಲಿ ನಡೆದ ಗ್ಯಾಂಗ್ ವಾರ್ನಲ್ಲಿ ಹತ್ಯೆಯಾದ ಕುಖ್ಯಾತ ರೌಡಿ ಕಾಲಿಯ ರಫೀಕ್ನ ಪುತ್ರನಾಗಿದ್ದು, ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.
ಪೊಲೀಸರು ಆರೋಪಿಯ ಮನೆ ಬಳಿ ತಲುಪಿ ವಶಕ್ಕೆ ಪಡೆಯಲು ಪ್ರಯತ್ನಿಸುತ್ತಿದ್ದಾಗ, ಮನೆಯವರು ದೊಡ್ಡ ಚಾಕುಗಳನ್ನು ಹಿಡಿದು ತಡೆದಿದ್ದಾರೆ. ಈ ವೇಳೆ ನಡೆದ ಮಾರಾಮಾರಿ ಮತ್ತು ಗೊಂದಲದ ಲಾಭ ಪಡೆದ ಆರೋಪಿ ಸುಹೈಲ್ ಸ್ಥಳದಿಂದ ಪರಾರಿಯಾಗಿದ್ದಾನೆ. ಬಳಿಕ ಬಂಧಿಸಲಾಗಿದೆ. ಈ ಘಟನೆಯಲ್ಲಿ ಹಲವು ಪೊಲೀಸರಿಗೆ ಗಾಯಗಳಾಗಿವೆ. ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಹೆಚ್ಚಿನ ಪೊಲೀಸ್ ಪಡೆ ಸ್ಥಳಕ್ಕೆ ಧಾವಿಸಿತ್ತು.