ಮಂಜೇಶ್ವರ: ಸುಮಾರು 70 ವರ್ಷಗಳ ಇತಿಹಾಸವಿರುವ ಬಂಗ್ರ ಮಂಜೇಶ್ವರದ ಸೇತುವೆ ಇದೀಗ ತೀವ್ರ ಶಿಥಿಲಾವಸ್ಥೆಯಲ್ಲಿದ್ದು, ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಭೀತಿಯಲ್ಲಿರುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಾರೆ. ಸೇತುವೆಯ ಅಡಿಭಾಗದ ಕಂಬಗಳು ತುಕ್ಕು ಹಿಡಿದು ಬಿರುಕು ಬಿಟ್ಟಿದ್ದು, ಸಂಬಂಧಪಟ್ಟ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸೇತುವೆಯು ದಶಕಗಳ ಹಿಂದೆಯೇ ನಿರ್ಮಾಣವಾಗಿದ್ದು, ಕಾಲದ ಹೊಡೆತಕ್ಕೆ ಸಿಲುಕಿ ಸಂಪೂರ್ಣ ದುರ್ಬಲಗೊಂಡಿದೆ ಎನ್ನಲಾಗುತ್ತಿದೆ. ಸೇತುವೆಯ ಮೇಲಿಂದ ಘನ ವಾಹನಗಳು ಸಂಚರಿಸುವಾಗ ಅದು ಅಲುಗಾಡುತ್ತಿದ್ದು, ಪ್ರಯಾಣಿಕರಲ್ಲಿ ಭಯದ ವಾತಾವರಣ ಉಂಟುಮಾಡುತ್ತಿದೆ. ವಾಹನ ಸವಾರರು ಮತ್ತು ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗಿದೆ.
ಸೇತುವೆಯ ಕೆಳಭಾಗದ ಮೂಲಕ ಮೀನುಗಾರರು ಕೂಡಾ ದೋಣಿಗಳ ಮೂಲಕ ನಿರಂತರವಾಗಿ ಸಂಚರಿಸುತ್ತಾರೆ. ಸೇತುವೆಯ ರಚನೆ ದುರ್ಬಲಗೊಂಡಿರುವ ಕಾರಣ, ಒಂದು ವೇಳೆ ದಿಢೀರನೆ ಸೇತುವೆ ಕುಸಿದರೆ ಕೆಳಗೆ ಸಂಚರಿಸುವ ಮೀನುಗಾರರ ಪ್ರಾಣಕ್ಕೂ ಕುತ್ತು ಬರುವ ಸಾಧ್ಯತೆಯಿದೆ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.
ದೊಡ್ಡದೊಂದು ದುರಂತ ಸಂಭವಿಸುವ ಮುನ್ನವೇ ಎಚ್ಚೆತ್ತುಕೊಂಡಿರುವ ಸ್ಥಳೀಯರು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ತುರ್ತಾಗಿ ಸೇತುವೆಯ ದುರಸ್ತಿ ಕಾರ್ಯ ಕೈಗೊಳ್ಳಬೇಕು ಅಥವಾ ಸಂಚಾರಕ್ಕೆ ಸೂಕ್ತ ಬದಲಿ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಈ ಸಮಸ್ಯೆಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕಾದ ಅವಶ್ಯಕತೆಯಿದೆ