ಸಂತಡ್ಕ: ಇತಿಹಾಸ ಪ್ರಸಿದ್ಧ ಸಂತಡ್ಕ ಮಾಡದ ಶ್ರೀ ಅರಸು ಸಂಕಲ ದೈವ ಕ್ಷೇತ್ರದಲ್ಲಿ ಲೋಕಕಲ್ಯಾಣ ಹಾಗೂ ಭಕ್ತರ ಅಭಿಷ್ಟಾರ್ಥ ಸಿದ್ಧಿಗಾಗಿ ಶ್ರೀ ರುದ್ರಯಾಗ, ಗಿರಿಜಾ ಕಲ್ಯಾಣೋತ್ಸವ ಹಾಗೂ ನೂತನ ಭೋಜನ ಶಾಲೆಯ ಉದ್ಘಾಟನಾ ಸಮಾರಂಭವು ಜೂನ್ 6 ಮತ್ತು 7 ರಂದು ವಿವಿಧ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಲಿದೆ.
ಜೂನ್ 6ರಂದು ಭವ್ಯ ಶೋಭಾಯಾತ್ರೆ
ಜೂನ್ 6ರ ಶನಿವಾರ ಸಂಜೆ 4 ಗಂಟೆಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಚಿಗುರುಪಾದೆಯಿಂದ ರುದ್ರಯಾಗ ಮತ್ತು ಗಿರಿಜಾ ಕಲ್ಯಾಣೋತ್ಸವದಲ್ಲಿ ಪೂಜಿಸಲ್ಪಡುವ ಶ್ರೀ ದೇವರ ವಿಗ್ರಹದ ಭವ್ಯ ಶೋಭಾಯಾತ್ರೆ ಮೆರವಣಿಗೆಯೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಬಳಿಕ ಸಂಜೆ 5 ಗಂಟೆಗೆ ವೈದಿಕರ ಆಗಮನ, ಪ್ರಾರ್ಥನೆ ಹಾಗೂ ಯಾಗ ಮಂಟಪ ಶುದ್ಧೀಕರಣ ಕಾರ್ಯಕ್ರಮಗಳು ಜರುಗಲಿವೆ.
ಜೂನ್ 7ರಂದು ರುದ್ರಯಾಗ ಮತ್ತು ಧಾರ್ಮಿಕ ಸಭೆ
ಭಾನುವಾರ ಬೆಳಿಗ್ಗೆ 6.30ರಿಂದ ಗಣಹೋಮ ಹಾಗೂ ಶ್ರೀ ದೈವಗಳಿಗೆ ವಿಶೇಷ ತಂಬಿಲ ಸೇವೆ ನಡೆಯಲಿದ್ದು, ಬೆಳಿಗ್ಗೆ 8 ಗಂಟೆಗೆ ಮಹತ್ವದ ರುದ್ರಯಾಗ ಆರಂಭಗೊಳ್ಳಲಿದೆ. ಬೆಳಿಗ್ಗೆ 11 ಗಂಟೆಗೆ ಪೂರ್ಣಾಹುತಿ ಮತ್ತು ಮಂತ್ರಾಕ್ಷತೆ ನೆರವೇರಲಿದೆ.
ಬೆಳಿಗ್ಗೆ 11.30ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ವೇದಮೂರ್ತಿ ನರಸಿಂಹ ತಂತ್ರಿಗಳು ಕುಡುಪು ಅವರ ಗೌರವಾನ್ವಿತ ಉಪಸ್ಥಿತಿ ಇರಲಿದ್ದು, ಶ್ರೀ ಅರಸು ಸಂಕಲ ದೈವ ಕ್ಷೇತ್ರ ಆಡಳಿತ ಟ್ರಸ್ಟ್ ಅಧ್ಯಕ್ಷ ಡಾ. ಶ್ರೀಧರ ಭಟ್ ಸಂತಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ.
ನೂತನ ಭೋಜನ ಶಾಲೆ ಉದ್ಘಾಟನೆ
ಇದೇ ಸಂದರ್ಭದಲ್ಲಿ ಕ್ಷೇತ್ರದ ನೂತನ ಭೋಜನ ಶಾಲೆಯನ್ನು ಕರ್ನಾಟಕ ಸರ್ಕಾರದ ಮಾನವ ಹಕ್ಕುಗಳ ಆಯೋಗದ ಪ್ರಭಾರ ಅಧ್ಯಕ್ಷರಾದ ಶ್ರೀ ಟಿ. ಶ್ಯಾಮ್ ಭಟ್ ಉದ್ಘಾಟಿಸಲಿದ್ದಾರೆ.
ಸಂಜೆ ಗಿರಿಜಾ ಕಲ್ಯಾಣೋತ್ಸವ ವೈಭವ
ಜೂನ್ 7ರ ಸಂಜೆ 5 ಗಂಟೆಯಿಂದ ಶ್ರೀ ಗಿರಿಜಾ ಕಲ್ಯಾಣೋತ್ಸವದ ಧಾರ್ಮಿಕ ವಿಧಿವಿಧಾನಗಳು ಆರಂಭಗೊಳ್ಳಲಿದ್ದು, ಸಂಜೆ 7.30ಕ್ಕೆ ಅಷ್ಟಾವಧಾನ ಸೇವೆ ಹಾಗೂ ಮಹಾಪೂಜೆ ನಡೆಯಲಿದೆ. ಬ್ರಹ್ಮಶ್ರೀ ವೇದಮೂರ್ತಿ ಪರಕಜೆ ಅನಂತನಾರಾಯಣ ಭಟ್ಟರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮಗಳು ಸಾಂಗೋಪಸಾಂಗವಾಗಿ ಜರುಗಲಿವೆ.