ಉಳಿಯತ್ತಡ್ಕ: 24ನೇ ವರ್ಷದ ವೈದಿಕ ಶಿಕ್ಷಣ ಶಿಬಿರದ ಸಮಾರೋಪ ಸಮಾರಂಭ ಸಂಪನ್ನ

​ಉಳಿಯತ್ತಡ್ಕ: ಗುರುಕೃಪಾ ವೈದಿಕ ಶಿಕ್ಷಣ ಸಮಿತಿ ಉಳಿಯತ್ತಡ್ಕ ಇದರ ವತಿಯಿಂದ ವಿಶ್ವಬ್ರಾಹ್ಮಣ ಸಮಾಜದ ಮಕ್ಕಳಿಗೆ ವೈದಿಕ ಧಾರ್ಮಿಕ ಸಂಸ್ಕಾರವನ್ನು ಒದಗಿಸುವ 24 ನೇ ವರ್ಷದ “ವೈದಿಕ ಶಿಕ್ಷಣ ಶಿಬಿರ”ವು ಇಲ್ಲಿನ ಗುರುಕೃಪಾ ನಿವಾಸದಲ್ಲಿ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.


​ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಬ್ರಹ್ಮ ಶ್ರೀ ಪುರೋಹಿತರತ್ನ ಬಿ. ಕೇಶವ ಆಚಾರ್ಯ ಅವರು, “ನಿತ್ಯ ನೈಮಿತ್ತಿಕ ಕರ್ಮಾನುಷ್ಠಾನವನ್ನು ಬಾಲ್ಯದಲ್ಲಿಯೇ ಅಳವಡಿಸಿಕೊಂಡಿದ್ದಲ್ಲಿ ಸಮಾಜವು ಬಲಿಷ್ಟವಾಗಿ ಬೆಳೆಯುವುದು. ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಧಾರೆ ಎರೆಯುವುದು ಅತ್ಯಂತ ಅವಶ್ಯಕವಾಗಿದೆ,” ಎಂದು ನುಡಿದರು.

ವೈದಿಕ ಪರಂಪರೆಯನ್ನು ಉಳಿಸುವಲ್ಲಿ ನಮ್ಮ ಪೂರ್ವಜರು ನಡೆದುಬಂದ ದಾರಿಯನ್ನು ಮೆಲುಕು ಹಾಕಿದ ಅವರು, ವೈದಿಕ ಶಿಕ್ಷಣವು ಕೇವಲ ಮಂತ್ರ ಪಠಣವಲ್ಲ, ಅದು ಜೀವನ ನಡೆಸುವ ಅತ್ಯುತ್ತಮ ಮಾರ್ಗ ಎಂದು ಅಭಿಪ್ರಾಯಪಟ್ಟರು.


​ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಳಿಗದ್ದೆ ವೆಂಕಟರಮಣ ಆಚಾರ್ಯ ಅವರು ವಹಿಸಿ ಮಾತನಾಡಿ, ಶಿಬಿರದ ಮಹತ್ವ ಹಾಗೂ ಮಕ್ಕಳಲ್ಲಿ ಸಂಸ್ಕಾರ ಬೆಳೆಸುವಲ್ಲಿ ಪೋಷಕರ ಪಾತ್ರದ ಕುರಿತು ಮಾತನಾಡಿದರು.


ಈ ಸಂದರ್ಭದಲ್ಲಿ ಸಮಿತಿಯ ಕಾರ್ಯದರ್ಶಿ ರವೀಂದ್ರ ಆಚಾರ್ಯ ಮುಳ್ಳೇರಿಯಾ, ಕೋಶಾಧಿಕಾರಿ ಉಳುವಾರು ವೆಂಕಟರಮಣ ಆಚಾರ್ಯ, ಗುರುಕೃಪಾ ಭಜನಾ ಸಂಘದ ಅಧ್ಯಕ್ಷ ಗುರುಪ್ರಸಾದ್ ಶರ್ಮ ಉಳಿಯತ್ತಡ್ಕ ಉಪಸ್ಥಿತರಿದ್ದರು. ಅತಿಥಿಗಳಾಗಿ ಪ್ರಾಣೇಶ್ ತಲಪ್ಪಾಡಿ, ಪುರೋಹಿತ ಗಣೇಶ ಆಚಾರ್ಯ ಮಧೂರು, ಪುರೋಹಿತ ಚಂದ್ರಶೇಖರ ಆಚಾರ್ಯ ಕಾಂತುಗುಡ್ಡೆ ಹಾಗೂ ಇನ್ನಿತರ ಸಮಾಜದ ಗಣ್ಯರು ಭಾಗವಹಿಸಿ ಶಿಬಿರಾರ್ಥಿಗಳನ್ನು ಹರಸಿದರು.


ಶಿಬಿರದ ಅಂಗವಾಗಿ ಶಿಬಿರಾರ್ಥಿಗಳಿಗೆ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಣೆ ಮಾಡಲಾಯಿತು.

ಭರತ್ ಆಚಾರ್ಯ ಸ್ವಾಗತಿಸಿ ನವೀನ್ ಆಚಾರ್ಯ ಕಡಂಬಾರು ವಂದಿಸಿದರು. ಕಿರಣ್ ಶರ್ಮ ಕಾರ್ಯಕ್ರಮ ನಿರೂಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!