ಬೆಂಗಳೂರು: ಪಶ್ಚಿಮ ಘಟ್ಟ ಸಂರಕ್ಷಣೆಯ ಹೆಸರಿನಲ್ಲಿ ಕಸ್ತೂರಿರಂಗನ್ ವರದಿಯನ್ನು ಅವೈಜ್ಞಾನಿಕವಾಗಿ ಜಾರಿಗೊಳಿಸಲು ಮುಂದಾದರೆ ಕರಾವಳಿ ಹಾಗೂ ಮಲೆನಾಡು ಭಾಗದ ಲಕ್ಷಾಂತರ ರೈತರು ಮತ್ತು ಮೂಲನಿವಾಸಿಗಳು ಬೀದಿಗೆ ಬೀಳಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿರುವ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು, ಸರ್ಕಾರ ತಕ್ಷಣವೇ ‘ಜೀರೋ ಬಫರ್ ಜೋನ್’ ನೀತಿ ಅನುಸರಿಸಿ ಕಾಡಿನ ಗಡಿಗೆ ಫೆನ್ಸಿಂಗ್ ಅಳವಡಿಸಬೇಕು ಮತ್ತು ರೈತರ ಹಿತರಕ್ಷಣೆಗೆ ಇಡೀ ಸದನ ಒಗ್ಗಟ್ಟಿನಿಂದ ನಿಲ್ಲಬೇಕು ಎಂದು ಕಲಾಪದಲ್ಲಿ ಬಲವಾಗಿ ಆಗ್ರಹಿಸಿದರು.
ವಿಧಾನ ಪರಿಷತ್ ಕಲಾಪದಲ್ಲಿ ಕಸ್ತೂರಿರಂಗನ್ ವರದಿ ಹಾಗೂ ಪಶ್ಚಿಮ ಘಟ್ಟದ ಜನರ ಸಮಸ್ಯೆಗಳ ಕುರಿತು ವಿಸ್ತೃತವಾಗಿ ಮಾತನಾಡಿದ ಅವರು, ಈ ಭಾಗದ ಜನರ ನೋವು ಮತ್ತು ಸಂಕಷ್ಟಗಳನ್ನು ಸರ್ಕಾರದ ಮುಂದಿಟ್ಟರು.

ಪ್ರಕೃತಿ ಪೂಜಕರನ್ನೇ ಅಪರಾಧಿಗಳಂತೆ ಕಾಣಲಾಗುತ್ತಿದೆ:
“ಕರಾವಳಿ-ಮಲೆನಾಡಿನ ಜನರು ತಲೆತಲಾಂತರಗಳಿಂದ ಭೂಮಿ ಮತ್ತು ಪ್ರಕೃತಿಯನ್ನು ಪೂಜಿಸಿಕೊಂಡು ಬದುಕುತ್ತಿರುವವರು. ಅವರ ಪೂರ್ವಜರ ಕಾಲದಿಂದಲೂ ಕಾಡನ್ನು ಸಂರಕ್ಷಿಸಿಕೊಂಡು ಬಂದಿದ್ದಾರೆಯೇ ಹೊರತು, ಅವರಿಂದ ಪರಿಸರಕ್ಕೆ ಯಾವುದೇ ಹಾನಿಯಾಗಿಲ್ಲ. ಆದರೆ, ಸ್ಯಾಟಲೈಟ್ ಇಮೇಜ್ ಆಧರಿಸಿ ತಯಾರಿಸಲಾದ ಈ ಅವೈಜ್ಞಾನಿಕ ವರದಿಯಿಂದಾಗಿ ನೂರಾರು ವರ್ಷಗಳಿಂದ ಬದುಕುತ್ತಿರುವ ಜನರೇ ಇಂದು ತಮ್ಮ ನೆಲ-ಹಕ್ಕುಗಳನ್ನು ಕಳೆದುಕೊಂಡು ಎದ್ದುಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಎಲೆಚುಕ್ಕಿ ರೋಗ, ಹಳದಿ ರೋಗ ಹಾಗೂ ಅತಿಯಾದ ಮಳೆಯಿಂದ ನಲುಗಿರುವ ರೈತರು, ಈ ವರದಿಯ ಆತಂಕದಿಂದಾಗಿ ಜೀವನ ಮತ್ತು ಮರಣದ ನಡುವೆ ತೊಳಲಾಡುವಂತಾಗಿದೆ” ಎಂದು ಶಾಸಕರು ಕಳವಳ ವ್ಯಕ್ತಪಡಿಸಿದರು.

ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ಬದುಕಿಗೆ ಪೆಟ್ಟು:
“ಕಸ್ತೂರಿರಂಗನ್ ವರದಿ ಜಾರಿಯಾದರೆ ರೈತರಿಗೆ ಕೃಷಿ ಸಾಲಗಳು ಸಿಗುವುದಿಲ್ಲ, ಸರ್ಕಾರದ ಸವಲತ್ತುಗಳು ಸ್ಥಗಿತಗೊಳ್ಳುತ್ತವೆ, ಕೊನೆಗೆ ರೈತರ ಮಕ್ಕಳಿಗೆ ವಿವಾಹ ಸಂಬಂಧಗಳು ಕೂಡಿಬರದಂತಹ ಗಂಭೀರ ಸಾಮಾಜಿಕ ಬಿಕ್ಕಟ್ಟು ಸೃಷ್ಟಿಯಾಗಲಿದೆ. ಅಷ್ಟೇ ಅಲ್ಲದೆ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯದಂತಹ ಪುಣ್ಯಕ್ಷೇತ್ರಗಳ ಬೆಟ್ಟದ ತುಟ್ಟತುದಿಯ ಧಾರ್ಮಿಕ ಆಚರಣೆಗಳು ಮತ್ತು ಪೂಜೆಗಳಿಗೂ ಈ ನಿಯಮಗಳಿಂದ ಧಕ್ಕೆಯಾಗಲಿದೆ. ಕಾಡಿನ ಕಿರು ಉತ್ಪನ್ನಗಳನ್ನು ನಂಬಿ ಬದುಕುವ ಕೊರಗರು ಸೇರಿದಂತೆ ಆದಿವಾಸಿ ಸಮುದಾಯಗಳ ಬದುಕು ಅತಂತ್ರವಾಗಲಿದೆ” ಎಂದು ಎಚ್ಚರಿಸಿದರು.

“ಕಸ್ತೂರಿರಂಗನ್ ವರದಿಯ ವ್ಯಾಪ್ತಿಯನ್ನು ಕಡಿಮೆ ಮಾಡುವಲ್ಲಿ ರಾಜಕೀಯ ಇಚ್ಛಾಶಕ್ತಿಯನ್ನು ನಮ್ಮ ರಾಜ್ಯ ಸರ್ಕಾರ ಪ್ರದರ್ಶಿಸಬೇಕು. ಕಿಲೋಮೀಟರ್ಗಟ್ಟಲೆ ಪ್ರದೇಶವನ್ನು ಬಫರ್ ಜೋನ್ ಮಾಡುವ ಬದಲು, ‘ಜೀರೋ ಬಫರ್ ಜೋನ್’ (Zero Buffer Zone) ಜಾರಿಗೊಳಿಸಬೇಕು. ಕಾಡಿನ ಗಡಿಗೆ ಸೂಕ್ತ ಫೆನ್ಸಿಂಗ್ (ತಂತಿ ಬೇಲಿ) ಅಳವಡಿಸಿ, ಕಾಡುಪ್ರಾಣಿಗಳು ಕಾಡಿನಲ್ಲೇ ಇರುವಂತೆ ನೋಡಿಕೊಳ್ಳಬೇಕು. ಇದರಿಂದ ಸುಳ್ಯ, ಕಡಬ ಭಾಗದಲ್ಲಿ ಹೆಚ್ಚುತ್ತಿರುವ ಕಾಡಾನೆ, ಚಿರತೆ, ಕಾಡುಹಂದಿಗಳ ಹಾವಳಿಗೂ ಶಾಶ್ವತ ಕಡಿವಾಣ ಬೀಳಲಿದ್ದು, ರೈತರು ನೆಮ್ಮದಿಯಿಂದ ಕೃಷಿ ಮಾಡಲು ಸಾಧ್ಯವಾಗುತ್ತದೆ” ಎಂದು ಸಲಹೆ ನೀಡಿದರು.


ಕಸ್ತೂರಿರಂಗನ್ ವರದಿಯ ವಿಚಾರದಲ್ಲಿ ಪರಸ್ಪರ ಬೆರಳು ತೋರಿಸುವ ರಾಜಕೀಯ ಮಾಡುವುದನ್ನು ಬಿಟ್ಟು, ಲಕ್ಷಾಂತರ ಜನರ ಬದುಕನ್ನು ಕಾಪಾಡಲು ಇಡೀ ಸದನ ಒಗ್ಗಟ್ಟಿನಿಂದ ನಿರ್ಣಯ ಕೈಗೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನಪರ ನಿಯಮಗಳನ್ನು ರೂಪಿಸುವಂತೆ ಒತ್ತಡ ಹೇರಬೇಕು ಎಂದು ಕಿಶೋರ್ ಕುಮಾರ್ ಪುತ್ತೂರು ಅವರು ಸದನದಲ್ಲಿ ಒತ್ತಾಯಿಸಿದರು.


