ಉಡುಪಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಅಳವಡಿಸಲಾದ ಆರು ಅತ್ಯಾಧುನಿಕ ಸ್ಪೀಡ್ ರ್ಯಾಡರ್ ಕ್ಯಾಮೆರಾಗಳು ಕಳೆದ ಒಂದು ವಾರದಲ್ಲಿ 46,753 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಪತ್ತೆಹಚ್ಚಿವೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.
ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿ ಠಾಣಾ ವ್ಯಾಪ್ತಿಯ ಉಚ್ಚಿಲ, ಕಾಪು ಠಾಣಾ ವ್ಯಾಪ್ತಿಯ ದಂಡತೀರ್ಥ, ಕೋಟ ಠಾಣಾ ವ್ಯಾಪ್ತಿಯ ತೆಕ್ಕಟ್ಟೆ, ಗಂಗೊಳ್ಳಿ ಠಾಣಾ ವ್ಯಾಪ್ತಿಯ ತ್ರಾಸಿ, ಬೈಂದೂರು ಠಾಣಾ ವ್ಯಾಪ್ತಿಯ ಕೆರ್ಗಾಲ್ ಹಾಗೂ ಪಡುಬಿದ್ರೆ-ಬೆಳ್ಮಣ್ ರಾಜ್ಯ ಹೆದ್ದಾರಿಯ ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ದೂಪದಕಟ್ಟೆ ಪ್ರದೇಶಗಳಲ್ಲಿ ಸ್ವಯಂಚಾಲಿತ ನಂಬರ್ ಪ್ಲೇಟ್ ರೀಡರ್ ಹೊಂದಿರುವ ರ್ಯಾಡರ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಈ ಕ್ಯಾಮೆರಾಗಳು ಮೇ 21ರಿಂದ ಕಾರ್ಯಾರಂಭ ಮಾಡಿದ್ದು, ಕಳೆದ ಏಳು ದಿನಗಳಲ್ಲಿ ಒಟ್ಟು 3,99,319 ವಾಹನಗಳ ಸಂಚಾರ ದಾಖಲಾಗಿದೆ. ಅವುಗಳಲ್ಲಿ 46,753 ವಾಹನಗಳು ವಿವಿಧ ಸಂಚಾರ ನಿಯಮಗಳನ್ನು ಉಲ್ಲಂಘಿಸಿರುವುದು ಪತ್ತೆಯಾಗಿದೆ.
ಅತೀವೇಗದ ಚಾಲನೆ ಪ್ರಕರಣಗಳೇ ಅಧಿಕವಾಗಿದ್ದು, 29,484 ದ್ವಿಚಕ್ರ, ತ್ರಿಚಕ್ರ ಹಾಗೂ ಲಘು ವಾಹನಗಳು ಮತ್ತು 2,279 ಘನ ವಾಹನಗಳು ವೇಗ ಮಿತಿ ಮೀರಿಸಿರುವುದು ದಾಖಲಾಗಿದೆ. ಜೊತೆಗೆ 12,184 ಮಂದಿ ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸಿದ್ದು, 11,396 ಮಂದಿ ಹೆಲ್ಮೆಟ್ ಇಲ್ಲದೆ ಸಂಚರಿಸಿದ್ದಾರೆ. 2,677 ವಿರುದ್ಧ ದಿಕ್ಕಿನ ಚಾಲನೆ ಹಾಗೂ 2,393 ಟ್ರಿಪಲ್ ರೈಡಿಂಗ್ ಪ್ರಕರಣಗಳೂ ದಾಖಲಾಗಿವೆ.
ಪ್ರದೇಶವಾರು ಅಂಕಿಅಂಶಗಳಲ್ಲಿ ಪಡುಬಿದ್ರಿಯಲ್ಲಿ ಅತಿ ಹೆಚ್ಚು 13,681 ಪ್ರಕರಣಗಳು ದಾಖಲಾಗಿದ್ದರೆ, ಕಾರ್ಕಳದಲ್ಲಿ 9,696, ಕಾಪುವಿನಲ್ಲಿ 8,005, ಕೋಟದಲ್ಲಿ 7,857, ಬೈಂದೂರಿನಲ್ಲಿ 7,713 ಹಾಗೂ ಗಂಗೊಳ್ಳಿಯಲ್ಲಿ 5,206 ಪ್ರಕರಣಗಳು ಪತ್ತೆಯಾಗಿವೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಮಾರ್ಗದರ್ಶನದಲ್ಲಿ ಕಂಟ್ರೋಲ್ ರೂಂ ಎಸ್ಸೈ ಅಜ್ಮಲ್ ಇಬ್ರಾಹಿಂ ಮಾಧ್ಯಮ ಪ್ರತಿನಿಧಿಗಳಿಗೆ ಕ್ಯಾಮೆರಾಗಳ ಕಾರ್ಯವೈಖರಿ ಹಾಗೂ ನಿಯಂತ್ರಣ ವ್ಯವಸ್ಥೆಯ ಕುರಿತು ಮಾಹಿತಿ ನೀಡಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಟೆಗೆ 80 ಕಿ.ಮೀ. ಹಾಗೂ ರಾಜ್ಯ ಹೆದ್ದಾರಿಯಲ್ಲಿ ಗಂಟೆಗೆ 60 ಕಿ.ಮೀ. ವೇಗ ಮಿತಿ ನಿಗದಿಪಡಿಸಲಾಗಿದೆ. ನಿಯಮ ಉಲ್ಲಂಘನೆಗಳಿಗೆ ಪ್ರತಿದಿನ 50ರಿಂದ 100 ಪ್ರಕರಣಗಳಿಗೆ ನೋಟಿಸ್ ಜಾರಿ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅತೀವೇಗದ ಚಾಲನೆಗೆ ದ್ವಿಚಕ್ರ ವಾಹನಗಳಿಗೆ ₹1,000 ಹಾಗೂ ಲಘು ಮತ್ತು ಘನ ವಾಹನಗಳಿಗೆ ₹2,000 ದಂಡ ವಿಧಿಸಲಾಗುತ್ತದೆ. ಹೆಲ್ಮೆಟ್ ಧರಿಸದಿರುವುದು, ಟ್ರಿಪಲ್ ರೈಡಿಂಗ್ ಮತ್ತು ಸೀಟ್ ಬೆಲ್ಟ್ ಧರಿಸದಿರುವುದಕ್ಕೆ ತಲಾ ₹500 ದಂಡ ವಿಧಿಸಲಾಗುತ್ತದೆ. ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಮಾಡಿದರೆ ಲಘು ವಾಹನಗಳಿಗೆ ₹3,000, ಘನ ವಾಹನಗಳಿಗೆ ₹5,000 ಹಾಗೂ ದ್ವಿಚಕ್ರ ವಾಹನಗಳಿಗೆ ₹1,000 ದಂಡ ವಿಧಿಸಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.