ಮಂಜೇಶ್ವರ: ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಅಭಿಯಾನದ ಭಾಗವಾಗಿ ‘ಸಮಗ್ರ ಶಿಕ್ಷಾ ಕೇರಳ’ದ ನೇತೃತ್ವದಲ್ಲಿ ಮಂಜೇಶ್ವರದ ಹೊಸಬೆಟ್ಟು ಸರ್ಕಾರಿ ಎಲ್.ಪಿ. ಶಾಲೆಯಲ್ಲಿ ಶಾಲಾ ಪ್ರವೇಶೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಶಾಲಾ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಶಾಲೆಗೆ ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.
ಮಂಜೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಶೀರ್ ಕನಿಲ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಯ್ಯದ್ ಯು.ಕೆ. ಸೈಫುಲ್ಲಾ ತಂಙಳ್ ಅವರು ಪ್ರವೇಶೋತ್ಸವವನ್ನು ಉದ್ಘಾಟಿಸಿದರು.
ಮಂಜೇಶ್ವರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಫಾತಿಮತ್ ಸುಹ್ರಾ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪಂಚಾಯಿತಿಯ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಂ.ಕೆ. ಅಬ್ದುಲ್ ರಹಮಾನ್ ಹಾಜಿ, ಪಿ.ಟಿ.ಎ ಅಧ್ಯಕ್ಷ ಮೊೈದೀನ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಾಲೆಯ ಮುಖ್ಯ ಶಿಕ್ಷಕಿ ಸವಿತಾ ಎ. ಅವರು ಸ್ವಾಗತ ಭಾಷಣ ಮಾಡಿದರು ಮತ್ತು ಸಿಬ್ಬಂದಿ ಕಾರ್ಯದರ್ಶಿ ಇಬ್ರಾಹಿಂ ಕರೀಮ್ ಅವರು ಧನ್ಯವಾದ ಸಮರ್ಪಿಸಿದರು.