ಮಂಜೇಶ್ವರ, ಜೂನ್ 2: ಮಲಯಾಳ ಮಾಧ್ಯಮದಲ್ಲಿ ಕಲಿಯುವ ಅವಕಾಶವಿದ್ದರೂ ಕನ್ನಡ ಮಾಧ್ಯಮವನ್ನೇ ಶೈಕ್ಷಣಿಕ ಭಾಷೆಯಾಗಿ ಆಯ್ಕೆ ಮಾಡಿಕೊಟ್ಟ ನನ್ನ ಹೆತ್ತವರ ನಿರ್ಧಾರ ನನ್ನ ಜೀವನ ಮತ್ತು ಬೆಳವಣಿಗೆಗೆ ಪೂರಕವಾಯಿತು ಎಂದು ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ A.K.M. Ashraf ಹೇಳಿದರು.
ಅವರು ಐಲದ ಶ್ರೀ ಶಾರದ ಭೋವಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಪ್ರವೇಶೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಲಾ ವ್ಯವಸ್ಥಾಪಕ ಆನಂದ ಕೆ. ಐಲ ದೀಪ ಪ್ರಜ್ವಲನೆ ನೆರವೇರಿಸಿದರು. ಮಂಗಲ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ರಹಮಾನ್ ಅಧ್ಯಕ್ಷತೆ ವಹಿಸಿದ್ದರು.
ಮಂಗಲ್ಪಾಡಿ ಗ್ರಾಮ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ರಜಾಕ್ ಬಪ್ಪೈತೊಟ್ಟಿ, ಮಂಜೇಶ್ವರ ಉಪಜಿಲ್ಲೆಯ ನಿವೃತ್ತ ಸಹಾಯಕ ಶಿಕ್ಷಣಾಧಿಕಾರಿ ಜಾರ್ಜ್ ಕ್ರಾಸ್ತಾ ಸಿ.ಎಚ್., ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಎಂ. ಸಲೀಂ, ವಸಂತಮಯ್ಯ ಹಾಗೂ ರವೀಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಕಿರಣ್ ಕುಮಾರ್, ಮಾತೃ ಮಂಡಳಿ ಅಧ್ಯಕ್ಷೆ ಸೌಜನ್ಯ, ಮಂಜೇಶ್ವರ ಉಪಜಿಲ್ಲಾ ನಿಯುಕ್ತ ಸಹಾಯಕ ಶಿಕ್ಷಣಾಧಿಕಾರಿ ಜಿತೇಂದ್ರ ಎಸ್.ಎಚ್., ಬಿಪಿಸಿ ರಾಜಗೋಪಾಲ್ ಹಾಗೂ ನಿವೃತ್ತ ಮುಖ್ಯ ಶಿಕ್ಷಕಿ ಜಲಜಾಕ್ಷಿ ಎ. ಶುಭ ಹಾರೈಸಿದರು.
ಶಾಲೆಯ ಮುಖ್ಯ ಶಿಕ್ಷಕಿ ಉಷಾ ಕುಮಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಪ್ರವೇಶೋತ್ಸವ ಸಮಿತಿ ಸಹ ಸಂಚಾಲಕಿ ಸ್ವಾತಿ ಉಚ್ಚಿಲ್ ಸ್ವಾಗತಿಸಿದರು. ಅಮಿತಾ ಐಲ ವಂದಿಸಿದರು. ಕೆ.ಪಿ. ನಭ ಮತ್ತು ರಂಜಿತ ಕಾರ್ಯಕ್ರಮ ನಿರೂಪಿಸಿದರು.