ತೆಂಕುತಿಟ್ಟು ಚಿಕ್ಕಮೇಳಗಳ ಒಕ್ಕೂಟದ ಕಾರ್ಯಕ್ರಮ: ಕಲಾವಿದರಿಗೆ ಸನ್ಮಾನ

ಮಂಗಳೂರು: ತೆಂಕುತಿಟ್ಟು ಚಿಕ್ಕಮೇಳಗಳ ಒಕ್ಕೂಟದ ಕಾರ್ಯಕ್ರಮವು ಒಕ್ಕೂಟದ ಅಧ್ಯಕ್ಷರಾದ ಅಶೋಕ್ ಶೆಟ್ಟಿ ಸರಪಾಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಕ್ಷೇತ್ರದ ಧರ್ಮದರ್ಶಿ ಸುರೇಶ್ ಸಾಲಿಯನ್ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೂರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ತೆಂಕುತಿಟ್ಟು ಚಿಕ್ಕಮೇಳಗಳ ಒಕ್ಕೂಟಕ್ಕೆ ಸಮಸ್ತ ಕಲಾಭಿಮಾನಿಗಳು ಸಹಕಾರ ನೀಡಬೇಕು. ಧರ್ಮ ಪ್ರಜ್ಞೆಯನ್ನು ಬೆಳೆಸುವ ಹಾಗೂ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು.

ವೇದಿಕೆಯಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಎಚ್. ರಾಘವ ಗೇರುಕಟ್ಟೆ, ಕುಮಾರ್ ಮಾಲೆಮಾರ್, ದಿವಾಕರದಾಸ್ ಕಾವಲಕಟ್ಟೆ, ಜಯಂತ ಕೆರೆಕಾಡು ಹಾಗೂ ಗಿರೀಶ್ ಆಚಾರ್ಯ ಕೆಮ್ಮಾರ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ಮೊದಲಿಗೆ ದೇವರ ಸಾನ್ನಿಧ್ಯದಲ್ಲಿ ಗೆಜ್ಜೆ ಮುಹೂರ್ತ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ತಿರುಗಾಟ ನಡೆಸುತ್ತಿರುವ ಒಕ್ಕೂಟದ ತಂಡಗಳ ಪ್ರಮುಖರನ್ನು ಕ್ಷೇತ್ರದ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕೋಶಾಧಿಕಾರಿ ದಿವಾಕರದಾಸ್ ಸ್ವಾಗತಿಸಿದರು. ಕಡಬ ದಿನೇಶ್ ರೈ ಕಾರ್ಯಕ್ರಮ ನಿರೂಪಿಸಿದರು. ಕುಮಾರ್ ಮಾಲೆಮಾರ್ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!