ಮೀಯಪದವು, ಜೂನ್ 1: ಫಾತಿಮಾ ಆಂಗ್ಲ ಮಾಧ್ಯಮ ಶಾಲೆಯ 2026-27ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವವು ಸೋಮವಾರ ಬೆಳಿಗ್ಗೆ 9.15ಕ್ಕೆ ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ನಡೆಯಿತು.
ಶಾಲಾ ವಾದ್ಯಗೋಷ್ಠಿಯ ಭವ್ಯ ಮೆರವಣಿಗೆಯೊಂದಿಗೆ ಕಾರ್ಯಕ್ರಮದ ಅತಿಥಿಗಳು ಹಾಗೂ ಹೊಸದಾಗಿ ದಾಖಲಾದ ವಿದ್ಯಾರ್ಥಿಗಳನ್ನು ಶಾಲಾ ಸಭಾಂಗಣಕ್ಕೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ವಿವಿಧ ಧಾರ್ಮಿಕ ಗ್ರಂಥಗಳ ವಾಚನ, ಪ್ರಾರ್ಥನಾ ವಿಧಿ ಹಾಗೂ ಆಕರ್ಷಕ ಸ್ವಾಗತ ನೃತ್ಯದ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಜೊತೆ ಕಾರ್ಯದರ್ಶಿ ವಂ. ಫಾ. ಡೇನಿಯಲ್ ಡಿಸೋಜ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಹರ್ಷದ್ ವರ್ಕಾಡಿ, ಪಿ.ಟಿ.ಎ. ಉಪಾಧ್ಯಕ್ಷ ಪ್ರವೀಣ್ ಡಿಸೋಜ, ಪಿ.ಟಿ.ಎ. ಕಾರ್ಯದರ್ಶಿ ಚಿತ್ರಾ ಶೆಟ್ಟಿ, ಶಾಲಾ ಆಡಳಿತ ಮಂಡಳಿ ಸದಸ್ಯ ಜೊಕಿಮ್ ಮೊಂತೇರೊ, ಶಾಲಾ ಮುಖ್ಯೋಪಾಧ್ಯಾಯಿನಿ ಪ್ರವೀತಾ ಕುಟ್ಟಿನ್ಹ, ಪಂಚಾಯತ್ ಸದಸ್ಯ ಸಿದ್ದಿಕ್ ಕೆ.ಎಂ. ಹಾಗೂ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಲೂವಿಸ್ ಮೊಂತೇರೊ ಭಾಗವಹಿಸಿದ್ದರು.
ಶಾಲಾ ಶಿಕ್ಷಕಿ ಎಲೊಮಿನಾ ಅವರು ಸ್ವಾಗತ ಭಾಷಣದ ಮೂಲಕ ಅತಿಥಿಗಳನ್ನು ಹಾಗೂ ಪೋಷಕರನ್ನು ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಶಾಲೆಯ ನೂತನ ಜೊತೆ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ವಂ. ಫಾ. ಡೇನಿಯಲ್ ಡಿಸೋಜ ಅವರನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಪ್ರವೀತಾ ಕುಟ್ಟಿನ್ಹ ಗೌರವಿಸಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ನೂತನ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದವನ್ನು ವಿಶೇಷವಾಗಿ ಸ್ವಾಗತಿಸಲಾಯಿತು. ಅತಿಥಿಗಳು ತಮ್ಮ ಸಂದೇಶಗಳಲ್ಲಿ ವಿದ್ಯಾರ್ಥಿಗಳಿಗೆ ಹೊಸ ಶೈಕ್ಷಣಿಕ ವರ್ಷದ ಶುಭ ಹಾರೈಸಿ, ಶಿಕ್ಷಣದೊಂದಿಗೆ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಶಿಕ್ಷಕಿ ಸೌಮ್ಯ ಕಾರ್ಯಕ್ರಮ ನಿರೂಪಿಸಿದರೆ, ಶಿಕ್ಷಕಿ ಹೇಮಲತಾ ಧನ್ಯವಾದ ಸಮರ್ಪಿಸಿದರು. ಬಳಿಕ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸುವ ಮೂಲಕ ನೂತನ ಶೈಕ್ಷಣಿಕ ವರ್ಷದ ಆರಂಭವನ್ನು ಸಿಹಿಯಾಗಿ ಆಚರಿಸಲಾಯಿತು.