ಭಾರತೀಯ ಮಜ್ದೂರ್ ಸಂಘದ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ವಿ. ರಾಧಾಕೃಷ್ಣನ್ ಜಿಲ್ಲೆಗೆ ಆಗಮನ

ಮಂಗಳೂರು, ಜೂನ್ 5: ಭಾರತೀಯ ಮಜ್ದೂರ್ ಸಂಘದ (ಬಿಎಂಎಸ್) ದಕ್ಷಿಣ ಹಾಗೂ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ವಿ. ರಾಧಾಕೃಷ್ಣನ್ ಅವರು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ್ದು, ಜೂನ್ 7ರಂದು ನಡೆಯಲಿರುವ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸುವುದರ ಜೊತೆಗೆ ಜಿಲ್ಲೆಯ ವಿವಿಧ ಸಂಯೋಜಿತ ಯೂನಿಯನ್‌ಗಳ ಚಟುವಟಿಕೆಗಳ ಪರಿಶೀಲನೆ ನಡೆಸಲಿದ್ದಾರೆ.

ಜಿಲ್ಲೆಗೆ ಆಗಮಿಸಿದ ಅವರನ್ನು ಭಾರತೀಯ ಮಜ್ದೂರ್ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಸಹ ಕಾರ್ಯವಾಹ ಪ್ರಕಾಶ್ ಪಿ.ಎಸ್., ಭಾರತೀಯ ಮಜ್ದೂರ್ ಸಂಘದ ರಾಜ್ಯ ಉಪಾಧ್ಯಕ್ಷ ಸತೀಶ್ ಶೆಟ್ಟಿ, ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ್ ಯು., ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲ ಕೃಷ್ಣ ಹಾಗೂ ಜಿಲ್ಲಾ ಉಪಾಧ್ಯಕ್ಷ ರೋಹಿತಾಶ್ವ ಉಪಸ್ಥಿತರಿದ್ದರು.

ಜಿಲ್ಲಾ ಭೇಟಿಯ ಅವಧಿಯಲ್ಲಿ ವಿ. ರಾಧಾಕೃಷ್ಣನ್ ಅವರು ಭಾರತೀಯ ಮಜ್ದೂರ್ ಸಂಘದ ವಿವಿಧ ಸಂಯೋಜಿತ ಯೂನಿಯನ್‌ಗಳ ಕಚೇರಿಗಳಿಗೆ ಭೇಟಿ ನೀಡಿ ಆಡಳಿತಾತ್ಮಕ ಮತ್ತು ಸಂಘಟನಾ ಚಟುವಟಿಕೆಗಳ ಪರಿಶೀಲನೆ ನಡೆಸಲಿದ್ದಾರೆ. ಸದಸ್ಯತ್ವ ನೋಂದಣಿ, ರಿಜಿಸ್ಟರ್ ನಿರ್ವಹಣೆ, ಲೆಕ್ಕಪತ್ರಗಳ ಸಂರಕ್ಷಣೆ, ವಾರ್ಷಿಕ ವರದಿಗಳ ಸಲ್ಲಿಕೆ, ಅಫಿಲಿಯೇಷನ್ ನವೀಕರಣ ಹಾಗೂ ಭಾರತೀಯ ಮಜ್ದೂರ್ ಸಂಘದ ನಿಯಮಾವಳಿಗಳ ಅನುಷ್ಠಾನದ ಕುರಿತು ಪದಾಧಿಕಾರಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.

ಸಂಘಟನೆಯ ಬಲವರ್ಧನೆ ಹಾಗೂ ಕಾರ್ಯಕ್ಷಮತೆಯ ವೃದ್ಧಿಗಾಗಿ ಎಲ್ಲಾ ಸಂಯೋಜಿತ ಯೂನಿಯನ್‌ಗಳು ಕಾನೂನುಬದ್ಧ ಹಾಗೂ ಸಂಘಟನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾದ ಅಗತ್ಯವನ್ನು ಅವರು ಒತ್ತಿಹೇಳಲಿದ್ದಾರೆ ಎಂದು ಸಂಘಟನೆಯ ಮೂಲಗಳು ತಿಳಿಸಿವೆ.

ಜೂನ್ 7ರಂದು ಜಿಲ್ಲಾ ಕಾರ್ಯಾಲಯದ “ಪ್ರಭಾಕರ ಘಾಟೆ” ಸಭಾಂಗಣದಲ್ಲಿ ನಡೆಯಲಿರುವ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಜಿಲ್ಲೆಯ ಸಂಘಟನಾ ಬೆಳವಣಿಗೆ, ಕಾರ್ಮಿಕರ ಸಮಸ್ಯೆಗಳು, ಸಂಯೋಜಿತ ಯೂನಿಯನ್‌ಗಳ ಕಾರ್ಯವೈಖರಿ, ಮುಂದಿನ ಕಾರ್ಯಕ್ರಮಗಳು ಹಾಗೂ ಸಂಘಟನಾ ಕಾರ್ಯತಂತ್ರಗಳ ಕುರಿತು ಸಮಗ್ರ ಚರ್ಚೆ ನಡೆಯಲಿದೆ.

SHARE
Loading spinner

One thought on “ಭಾರತೀಯ ಮಜ್ದೂರ್ ಸಂಘದ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ವಿ. ರಾಧಾಕೃಷ್ಣನ್ ಜಿಲ್ಲೆಗೆ ಆಗಮನ

Leave a Reply

Your email address will not be published. Required fields are marked *

error: Content is protected !!