ಸಂಸ್ಕಾರಯುತ ಶಿಕ್ಷಣ ಇಂದಿನ ಅಗತ್ಯ: ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ

ಪುತ್ತೂರು, ಜೂನ್ 5: ಜಗತ್ತು ವೇಗವಾಗಿ ಬದಲಾಗುತ್ತಿದ್ದು, ಹೊಸ ಕಲ್ಪನೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಅಗತ್ಯವಾಗಿದೆ. ಶಿಕ್ಷಣದ ಮಾಧ್ಯಮಕ್ಕಿಂತಲೂ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಒಳಗೊಂಡ ಶಿಕ್ಷಣವೇ ಇಂದಿನ ಅಗತ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದರು.

ಅವರು ಬನ್ನೂರು ಕೃಷ್ಣನಗರದ ಅಲುಂಬುಡ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ವರ್ಷದ ಆರಂಭ-2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಶಿಕ್ಷಣ ನೀತಿಯು ಗುಲಾಮಗಿರಿಯ ಮನೋಭಾವದಿಂದ ಹೊರಬರಲು ಹಾಗೂ ವಿದ್ಯಾರ್ಥಿಗಳಲ್ಲಿ ಸ್ವಾಭಿಮಾನ ಮತ್ತು ಸೃಜನಶೀಲತೆಯನ್ನು ಬೆಳೆಸಲು ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ದೇಶದ ಮಕ್ಕಳ ವ್ಯಕ್ತಿತ್ವ ವಿಕಸನದ ಜತೆಗೆ ಮಾನವ ಸಂಪನ್ಮೂಲವನ್ನು ಸಾಮಾಜಿಕ ಶಕ್ತಿಯಾಗಿ ಪರಿವರ್ತಿಸುವ ಪ್ರಯತ್ನಗಳು ನಡೆಯಬೇಕಿವೆ. ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸವಾಲುಗಳನ್ನು ಎದುರಿಸುವ ಗುಣವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಹಣ ಸಂಪಾದನೆಯೇ ಶಿಕ್ಷಣದ ಅಂತಿಮ ಗುರಿಯಾಗಬಾರದು ಎಂದು ಅವರು ಹೇಳಿದರು.

ಒಂದು ಕನಸನ್ನು ನನಸು ಮಾಡುವ ಉದ್ದೇಶದಿಂದ ಎವಿಜಿ ವಿದ್ಯಾಸಂಸ್ಥೆ ನಡೆಸುತ್ತಿರುವ ಶೈಕ್ಷಣಿಕ ಸೇವೆ ವಿಶೇಷವಾಗಿದ್ದು, ಮುಂದಿನ ದಿನಗಳಲ್ಲಿ ಇದು ಉನ್ನತ ಶಿಕ್ಷಣ ಸಂಸ್ಥೆಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.

ಸಭಾ ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿ ವಿಖ್ಯಾತ್ ಅವರು ಭಾರತೀಯ ಸಂವಿಧಾನದ ಪೀಠಿಕೆಯನ್ನು ವಾಚಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆ ವಹಿಸಿದ್ದರು. ಸಂಸ್ಥೆಯ ಸಂಚಾಲಕ ಎ.ವಿ. ನಾರಾಯಣ ಪ್ರಸ್ತಾವನೆಗೈದರು.

ವೇದಿಕೆಯಲ್ಲಿ ಸಂಸ್ಥೆಯ ಸಂಚಾಲಕ ಎ.ವಿ. ನಾರಾಯಣ, ಆಡಳಿತ ಮಂಡಳಿ ಉಪಾಧ್ಯಕ್ಷ ಉಮೇಶ್ ಮಲುವೇಲ್, ಮುಖ್ಯಶಿಕ್ಷಕ ಅಮರನಾಥ ಬಿ.ಪಿ., ಆಡಳಿತಾಧಿಕಾರಿ ಗುಡ್ಡಪ್ಪ ಗೌಡ ಬಲ್ಯ ಹಾಗೂ ಪಿಟಿಎ ಅಧ್ಯಕ್ಷೆ ಸೌಮ್ಯಶ್ರೀ ಹೆಗ್ಡೆ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!