ಸಿಇಟಿ ಫಲಿತಾಂಶ ಪ್ರಕಟ: ಇಂಜಿನಿಯರಿಂಗ್‌ನಲ್ಲಿ ತನೀಶಾ ಕಾರ್ತಿಕ್ ರಾಜ್ಯ ಪ್ರಥಮ, ಕರಾವಳಿ ವಿದ್ಯಾರ್ಥಿಗಳಿಂದ ಗಮನಾರ್ಹ ಸಾಧನೆ

ಬೆಂಗಳೂರು, ಜೂ. 6: ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಪದವಿ ಕೋರ್ಸ್‌ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯ ಫಲಿತಾಂಶವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಶುಕ್ರವಾರ ಪ್ರಕಟಿಸಿದರು.

ಈ ಬಾರಿ ಸಿಇಟಿಗೆ 3,30,646 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, 3,09,014 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 2,92,782 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ.

ಇಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ಆರ್.ವಿ. ಪಿಯು ಕಾಲೇಜಿನ ವಿದ್ಯಾರ್ಥಿನಿ ತನೀಶಾ ಕಾರ್ತಿಕ್ 99.44 ಶೇಕಡಾ ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಬೆಂಗಳೂರಿನ ಕೆಎಂಡಬ್ಲ್ಯುಎ ಪಿಯು ಕಾಲೇಜಿನ ವಿದ್ಯಾರ್ಥಿ ಸೃಜನ್ ಬಿ.ಎಸ್. ದ್ವಿತೀಯ ರ್ಯಾಂಕ್ ಹಾಗೂ ಬೆಂಗಳೂರಿನ ಆರ್.ವಿ. ಪಿಯು ಕಾಲೇಜಿನ ನಿನಾದ್ ವಸಿಷ್ಠ ತೃತೀಯ ರ್ಯಾಂಕ್ ಗಳಿಸಿದ್ದಾರೆ.

ಮಂಗಳೂರಿನ ಟಿ.ಎಲ್.ಸಿ. ಪಿಯು ಕಾಲೇಜಿನ ವಿದ್ಯಾರ್ಥಿನಿ ಇರಾ ಜೈನ್ ನಾಲ್ಕನೇ ರ್ಯಾಂಕ್, ವಿದ್ಯಾರ್ಥಿ ರಿಶೋನ್ ಫೆರ್ನಾಂಡಿಸ್ ಐದನೇ ರ್ಯಾಂಕ್ ಹಾಗೂ ಅಬ್ಬಿ ಸಣ್ಣಯ್ಯ ಎಂಟನೇ ರ್ಯಾಂಕ್ ಗಳಿಸಿದ್ದಾರೆ. ಬೆಳ್ತಂಗಡಿ ಗುರುವಾಯನಕೆರೆಯ ವಿದ್ವತ್ ಪಿಯು ಕಾಲೇಜಿನ ವಿದ್ಯಾರ್ಥಿ ಚಿನ್ಮಯ್ ಜಿ.ಕೆ. ಏಳನೇ ರ್ಯಾಂಕ್ ಪಡೆದಿದ್ದಾರೆ.

ಪಶುವೈದ್ಯಕೀಯ ವಿಭಾಗದಲ್ಲಿ ಬೆಂಗಳೂರಿನ ಬಿಎಎಸ್‌ಇ ಕಾಲೇಜಿನ ವಿದ್ಯಾರ್ಥಿನಿ ನಯನಾ ಗೋಪಿ ಪ್ರಥಮ, ದಾವಣಗೆರೆಯ ಎಂ.ವಿ. ಪಿಯು ಕಾಲೇಜಿನ ವಿದ್ಯಾರ್ಥಿನಿ ಅಮೂಲ್ಯ ಎಸ್. ದ್ವಿತೀಯ ಹಾಗೂ ಬೆಂಗಳೂರಿನ ಆರ್.ವಿ. ಪಿಯು ಕಾಲೇಜಿನ ವಿದ್ಯಾರ್ಥಿ ರಿತ್ವಿಕ್ ಕುಮಾರ್ ತೃತೀಯ ರ್ಯಾಂಕ್ ಪಡೆದಿದ್ದಾರೆ.

ಕೃಷಿ ವಿಭಾಗದಲ್ಲಿ ಬೆಂಗಳೂರಿನ ಆರ್.ವಿ. ಪಿಯು ಕಾಲೇಜಿನ ವಿದ್ಯಾರ್ಥಿ ನಿನಾದ್ ವಸಿಷ್ಠ ಪ್ರಥಮ ರ್ಯಾಂಕ್ ಗಳಿಸಿದ್ದು, ಧಾರವಾಡದ ಅರ್ಜುನ್ ಪಿಯು ಕಾಲೇಜಿನ ವಿದ್ಯಾರ್ಥಿ ಅನ್ನೋಲ್ ಪ್ರಭು ದ್ವಿತೀಯ ಹಾಗೂ ಮಂಗಳೂರಿನ ಎಕ್ಸ್‌ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿ ಸಮಯ್ ಎ.ಎಸ್. ತೃತೀಯ ರ್ಯಾಂಕ್ ಪಡೆದಿದ್ದಾರೆ.

ನರ್ಸಿಂಗ್ ವಿಭಾಗದಲ್ಲಿ ನಯನಾ ಗೋಪಿ ಪ್ರಥಮ, ಅಮೂಲ್ಯ ಎಸ್. ದ್ವಿತೀಯ ಹಾಗೂ ರಿತ್ವಿಕ್ ಕುಮಾರ್ ತೃತೀಯ ರ್ಯಾಂಕ್ ಗಳಿಸಿದ್ದಾರೆ. ಯೋಗ ಮತ್ತು ನ್ಯಾಚುರೋಪತಿ ವಿಭಾಗದಲ್ಲಿ ನಯನಾ ಗೋಪಿ ಪ್ರಥಮ, ಅಮೂಲ್ಯ ಎಸ್. ದ್ವಿತೀಯ ಹಾಗೂ ಸುಚಿತಾ ಎಂ. ತೃತೀಯ ರ್ಯಾಂಕ್ ಪಡೆದಿದ್ದಾರೆ.

ಬಿ.ಫಾರ್ಮಾ ವಿಭಾಗದಲ್ಲಿ ನಯನಾ ಗೋಪಿ ಪ್ರಥಮ, ಅಮೂಲ್ಯ ಎಸ್. ದ್ವಿತೀಯ ಹಾಗೂ ಸುಚಿತಾ ಎಂ. ತೃತೀಯ ರ್ಯಾಂಕ್ ಗಳಿಸಿದ್ದರೆ, ಫಾರ್ಮಾ-ಡಿ ವಿಭಾಗದಲ್ಲೂ ನಯನಾ ಗೋಪಿ ಪ್ರಥಮ, ಅಮೂಲ್ಯ ಎಸ್. ದ್ವಿತೀಯ ಹಾಗೂ ಸುಚಿತಾ ಎಂ. ತೃತೀಯ ರ್ಯಾಂಕ್ ಗಳಿಸಿ ಸಾಧನೆ ಮೆರೆದಿದ್ದಾರೆ.

ಅಭ್ಯರ್ಥಿಗಳು ಜೂನ್ 6ರಂದು ಮಧ್ಯಾಹ್ನ 2 ಗಂಟೆಯ ಬಳಿಕ ಆನ್‌ಲೈನ್ ಮೂಲಕ ತಮ್ಮ ಅಂಕಪಟ್ಟಿ ಹಾಗೂ ರ್ಯಾಂಕ್‌ಗಳನ್ನು ವೀಕ್ಷಿಸಬಹುದಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!