ಆಸ್ತಿ ತೆರಿಗೆ ಹೆಚ್ಚಳ ಖಂಡಿಸಿ ಸಿಪಿಐ(ಎಂ) ಪ್ರತಿಭಟನೆ

ಮಂಗಳೂರು, ಜೂ. 8: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಿಸಿರುವ ಕ್ರಮವನ್ನು ಖಂಡಿಸಿ ಸಿಪಿಐ(ಎಂ) ಮಂಗಳೂರು ನಗರ ಸಮಿತಿ ವತಿಯಿಂದ ಸೋಮವಾರ ಲಾಲ್‌ಬಾಗ್‌ನಲ್ಲಿರುವ ಮಹಾನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ(ಎಂ) ಮುಖಂಡ ಇಮ್ತಿಯಾಜ್, ಮನೆ ಬಾಡಿಗೆದಾರರ ಮೇಲೆ ನಡೆಯುತ್ತಿರುವ ಶೋಷಣೆಯನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಕೆಲ ಮನೆ ಮಾಲೀಕರು ಯಾವುದೇ ಮುನ್ನೋಟಿಸ್ ನೀಡದೆ ವಿದ್ಯುತ್ ಹಾಗೂ ನೀರಿನ ಸಂಪರ್ಕ ಕಡಿತಗೊಳಿಸುವುದು, ಮನೆ ಖಾಲಿ ಮಾಡುವಂತೆ ಒತ್ತಡ ಹೇರುವುದು ಸೇರಿದಂತೆ ಕಾನೂನುಬಾಹಿರ ಕ್ರಮಗಳನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಬಾಡಿಗೆದಾರರಿಗೆ ಕಾನೂನಿನಡಿ ರಕ್ಷಣೆ ಲಭ್ಯವಿದ್ದು, ಶೋಷಕ ಮನೆ ಮಾಲೀಕರ ವಿರುದ್ಧ ಬಾಡಿಗೆದಾರರನ್ನು ಸಂಘಟಿಸಿ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಇದೇ ವೇಳೆ, ಬಡವರಿಗಾಗಿ ನಿರ್ಮಿಸಲಾಗುತ್ತಿರುವ ನಿವೇಶನ ಹಾಗೂ ಫ್ಲಾಟ್ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ ಮನೆಗಳನ್ನು ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು. ನಿರುದ್ಯೋಗ, ಬೆಲೆ ಏರಿಕೆ ಹಾಗೂ ಆರ್ಥಿಕ ಸಂಕಷ್ಟದ ನಡುವೆಯೇ ಬಡವರ ರಕ್ಷಣೆಗೆ ಸರ್ಕಾರ ಮತ್ತು ಸ್ಥಳೀಯ ಆಡಳಿತ ಮುಂದಾಗಬೇಕು ಎಂದರು.

ಮಹಾನಗರ ಪಾಲಿಕೆಯು ಮನೆ ಹಾಗೂ ವಾಣಿಜ್ಯ ಕಟ್ಟಡಗಳ ಮೇಲಿನ ಆಸ್ತಿ ತೆರಿಗೆಯನ್ನು ಶೇ.30ರಷ್ಟು ಹೆಚ್ಚಿಸಿರುವುದರಿಂದ ಮಧ್ಯಮ ವರ್ಗ ಮತ್ತು ಬಡ ಜನರಿಗೆ ಹೆಚ್ಚುವರಿ ಆರ್ಥಿಕ ಹೊರೆ ಉಂಟಾಗಿದೆ. ಆಸ್ತಿ ತೆರಿಗೆ ಹೆಚ್ಚಳವನ್ನು ತಕ್ಷಣ ಹಿಂಪಡೆಯಬೇಕು ಹಾಗೂ ನಿವೇಶನ ತೆರಿಗೆ ಸಂಬಂಧಿತ ಆದೇಶಗಳನ್ನು ರದ್ದುಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!