ತಿರುವನಂತಪುರ: ರಾಜ್ಯದಲ್ಲಿ ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಯೋಜನೆಯನ್ನು ಮೊದಲ ಹಂತದಲ್ಲಿ ಸಾಮಾನ್ಯ (ಆರ್ಡಿನರಿ) ಬಸ್‌ಗಳಿಗೆ ಮಾತ್ರ ಸೀಮಿತಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ.
ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ತಾಂತ್ರಿಕ ಹಾಗೂ ಆರ್ಥಿಕ ಅಂಶಗಳ ಕುರಿತು ಸಾರಿಗೆ ಸಚಿವರು ಮುಖ್ಯಮಂತ್ರಿ ಅವರೊಂದಿಗೆ ಮಹತ್ವದ ಚರ್ಚೆ ನಡೆಸಿದ್ದು, ಆರಂಭಿಕ ಹಂತದಲ್ಲಿ ಆರ್ಡಿನರಿ ಬಸ್‌ಗಳಲ್ಲಿ ಮಾತ್ರ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ ಕುರಿತು ಒಮ್ಮತ ವ್ಯಕ್ತವಾಗಿದೆ.
ಈ ವ್ಯವಸ್ಥೆಯನ್ನು 100 ದಿನಗಳ ಕಾಲ ಜಾರಿಗೆ ತಂದು, ಅದರ ಕಾರ್ಯಸಾಧ್ಯತೆ, ಪ್ರಯಾಣಿಕರ ಪ್ರತಿಕ್ರಿಯೆ ಹಾಗೂ ಕೆಎಸ್‌ಆರ್‌ಟಿಸಿಗೆ ಆಗುವ ಆರ್ಥಿಕ ಪರಿಣಾಮಗಳ ಕುರಿತು ಸಮಗ್ರ ಅಧ್ಯಯನ ನಡೆಸಲು ಸರ್ಕಾರ ನಿರ್ಧರಿಸಿದೆ. ಈ ಅವಧಿಯ ಮೌಲ್ಯಮಾಪನದ ಬಳಿಕ ಯೋಜನೆಯ ಎರಡನೇ ಹಂತವನ್ನು ಜಾರಿಗೆ ತಂದು, ಅಗತ್ಯವಿದ್ದಲ್ಲಿ ಹೆಚ್ಚಿನ ಬಸ್ ಸೇವೆಗಳಿಗೂ ವಿಸ್ತರಿಸುವ ಸಾಧ್ಯತೆ ಇದೆ.
ಸರ್ಕಾರದ ಲೆಕ್ಕಾಚಾರದ ಪ್ರಕಾರ, ಮೊದಲ ಹಂತದಲ್ಲಿ ಯೋಜನೆಯನ್ನು ಆರ್ಡಿನರಿ ಬಸ್‌ಗಳಿಗೆ ಮಾತ್ರ ಸೀಮಿತಗೊಳಿಸಿದರೆ ಕೆಎಸ್‌ಆರ್‌ಟಿಸಿಗೆ ಆಗುವ ಆದಾಯ ನಷ್ಟವನ್ನು ಭರಿಸಲು ತಿಂಗಳಿಗೆ ಸುಮಾರು ₹57 ಕೋಟಿ ಅನುದಾನ ಸಾಕಾಗಲಿದೆ.
ಆದರೆ ಉತ್ತರ ಕೇರಳದ ಜಿಲ್ಲೆಗಳಲ್ಲಿ ಆರ್ಡಿನರಿ ಬಸ್‌ಗಳ ಸಂಖ್ಯೆ ಕಡಿಮೆಯಿರುವುದರಿಂದ ಮಹಿಳೆಯರಿಗೆ ಯೋಜನೆಯ ಸಂಪೂರ್ಣ ಪ್ರಯೋಜನ ದೊರೆಯುವುದಿಲ್ಲ ಎಂಬ ಆತಂಕ ವ್ಯಕ್ತವಾಗಿದೆ. ಹೀಗಾಗಿ ಆ ಪ್ರದೇಶಗಳಲ್ಲಿ ಫಾಸ್ಟ್ ಪ್ಯಾಸೆಂಜರ್ ಬಸ್‌ಗಳಲ್ಲಿಯೂ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು ಎಂಬ ಬೇಡಿಕೆ ಜೋರಾಗಿದೆ.
ಈ ವಿಚಾರವನ್ನು ಮುಖ್ಯಮಂತ್ರಿ ಅವರೊಂದಿಗೆ ನಡೆದ ಸಭೆಯಲ್ಲಿ ಸಾರಿಗೆ ಸಚಿವರು ಪ್ರಸ್ತಾಪಿಸಿದ್ದು, ಮಹಿಳೆಯರಿಗೆ ಸಮಾನ ಪ್ರಯೋಜನ ದೊರೆಯುವಂತೆ ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಚರ್ಚೆ ನಡೆದಿದೆ.
ಇದರ ಜೊತೆಗೆ, ಯೋಜನೆಯಿಂದ ಉಂಟಾಗುವ ಹಣಕಾಸಿನ ಒತ್ತಡವನ್ನು ನಿರ್ವಹಿಸಲು ಕೇರಳ ಹಣಕಾಸು ನಿಗಮ (KFC) ಮೂಲಕ ಕೆಎಸ್‌ಆರ್‌ಟಿಸಿಗೆ ಸಾಲ ಸೌಲಭ್ಯ ಒದಗಿಸುವ ಪ್ರಸ್ತಾವನೆಯೂ ಪರಿಶೀಲನೆಯಲ್ಲಿದೆ. ಸಾಲದ ಬಡ್ಡಿದರ ಹಾಗೂ ಇತರೆ ಷರತ್ತುಗಳ ಕುರಿತು ಕೆಎಫ್‌ಸಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಯುತ್ತಿದೆ.
ಬುಧವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಸಂಬಂಧಿಸಿದ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದ್ದು, ಸಭೆಯ ಬಳಿಕ ಅಧಿಕೃತ ಆದೇಶ ಹೊರಬೀಳುವ ನಿರೀಕ್ಷೆಯಿದೆ.