ಬಂಟ್ವಾಳ: ಮುಂಬಾಯಿಂದ ಮಂಗಳೂರಿಗೆ ತೆರಳುವ ಮತ್ಸ್ಯಗಂಧ ಎಕ್ಸ್ ಪ್ರೆಸ್ ರೈಲಿನಲ್ಲಿ ಬೇರೆ ಬೇರೆ ಬೋಗಿನಲ್ಲಿ ಪ್ರಯಾಣಿಸುತ್ತಿದ್ದ ಮಂಗಳೂರು ಮೂಲದ ಇಬ್ಬರು ಮಹಿಳಾ ಪ್ರಯಾಣಿಕರ ಅಮೂಲ್ಯ ವಸ್ತುಗಳಿದ್ದ ಬ್ಯಾಗ್ ಕಳವು ನಡೆದಿದೆ. ಮಡಗಾಂವ್ ರೈಲು ನಿಲ್ದಾಣದಲ್ಲಿ ಹತ್ತು ನಿಮಿಷಗಳ ರೈಲು ನಿಲ್ಲಿಸಿದ್ದ ವೇಳೆ ಕಳವು ನಡೆದಿದೆ. ರೈಲು ಸಂಖ್ಯೆ 12619 ರಲ್ಲಿ ಪ್ರಯಾಣಿಸುತ್ತಿದ್ದ ಮೂಲ್ಕಿ ಮೂಲದ ರಜನಿ ಶೆಟ್ಟಿ ಹಾಗೂ ಸುರತ್ಕಲ್ ಮೂಲದ ವಿನಯ ಶೆಟ್ಟಿ ಎಂಬಿಬ್ಬರ ಬ್ಯಾಗ್ ಕಳವು ನಡೆದಿದೆ.
ಬೋಗಿ ಸಂಖ್ಯೆ ಎಸ್. ೫ ಹಾಗೂ ಬೋಗಿ ಸಂಖ್ಯೆ ಎಸ್ ೩ ಯಲ್ಲಿ ಬಾಗಿಲು ಪಕ್ಕದ ಸೀಟಿನಲ್ಲಿ ಮುಂಜಾನೆ ಸುಮಾರು 4 ಗಂಟೆಗೆ ಮಲಗಿದ್ದ ಮಹಿಳೆಯರ ಬ್ಯಾಗ್ ನ್ನು ಎಳೆದುಕೊಂಡು ಪರಾರಿಯಾಗಿದ್ದಾರೆ. ಎಸ್.೩ ಯಲ್ಲಿ ಮಲಗಿದ್ದ ಮಹಿಳೆ ಬ್ಯಾಗ್ ಎಳೆಯುವ ವೇಳೆ ಜೋರಾಗಿ ಬೊಬ್ಬೆ ಹಾಕಿ ಆತನ ಹಿಂದೆ ಓಡಿ ಹೋಗಿ ಹಿಡಿಯಲು ಪ್ರಯತ್ನ ಮಾಡಿ ಬಳಿಕ ಬೋಗಿಯಿಂದ ಹಾರಲು ಯತ್ನಿಸಿ ಜೀವಕ್ಕೆ ಅಪಾಯವಾಗುವುದು ಸ್ವಲ್ಪದರಲ್ಲಿ ತಪ್ಪಿದೆ.
ಇದೇ ರೀತಿ ಎಸ್.೫ ಬೋಗಿಯಲ್ಲಿದ್ದ ಮಹಿಳೆಯ ಬ್ಯಾಗ್ ನ್ನು ಕೂಡ ಇದೇ ಮಾದರಿಯಲ್ಲಿ ಎಗರಿಸುವ ಸಂದರ್ಭದಲ್ಲಿ ಮಹಿಳೆ ಜೋರಾಗಿ ಕಿರುಚಿದಾಗ ಹತ್ತಿರದ ಯುವಕರು ನೋಡುತ್ತಿದ್ದಂತೆ ರೈಲಿನಿಂದ ಹಾರಿ ಓಡಿ ಹೋಗಿ ಅಲ್ಲೇ ರೈಲು ನಿಲ್ದಾಣ ಪಕ್ಕದಲ್ಲಿ ನಿಲ್ಲಿಸಿದ್ದ ಗೋಲ್ಡ್ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಕುಳಿತು ಪರಾರಿಯಾಗಿದ್ದಾನೆ.
ಮಡಗಾಂವ್ ರೈಲು ನಿಲ್ದಾಣದಲ್ಲಿ ಕಳವು ಪ್ರಕರಣಗಳು ನಡೆಯುತ್ತಲೇ ಇವೆ ಎಂಬ ಮಾತನ್ನು ರೈಲ್ವೆ ಟಿ.ಟಿ.ಯವರು ಉಲ್ಲೇಖ ಮಾಡುತ್ತಾರೆ.
ರೈಲ್ವೆ ಪೋಲೀಸ್ ಗೆ ಆನ್ ಲೈನ್ ಮೂಲಕ ದೂರು ನೀಡಿ ಸುಮಾರು ಒಂದು ಗಂಟೆಗಳ ಕಾಲ ಕಳವು ನಡೆದ ಪ್ರಕರಣದ ಬಗ್ಗೆ ರೈಲ್ವೆ ಇಲಾಖೆಯ ಟಿ.ಟಿ.ಸಿ.ಯವರು ತನಿಖೆ ನಡೆಸುತ್ತಿದ್ದರು ಕೂಡ ರೈಲ್ವೆ ಪೋಲೀಸರು ಕನಿಷ್ಠ ಬೋಗಿಯೊಳಗೆ ಕಾಲಿಡುವ ಪ್ರಯತ್ನವನ್ನು ಮಾಡಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.ರೈಲಿನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಯಾವುದೇ ಭದ್ರತೆ ಅಥವಾ ಸುರಕ್ಷಾ ವ್ಯವಸ್ಥೆಯಿಲ್ಲ ಎಂಬ ಮಾತನ್ನು ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ರೈಲ್ವೆ ಸಚಿವರು ರೈಲು ಬೋಗಿಯೊಳಗಿನ ಅವ್ಯಸ್ಥೆಗಳ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಮಹಿಳೆಯರ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮಹಿಳಾ ಪ್ರಯಾಣಿಕರು ಒತ್ತಾಯ ಮಾಡಿದ್ದಾರೆ.ಇದೀಗ ರೈಲ್ವೆ ಪೋಲೀಸರು ಕಳ್ಳತನ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.