ಕಾಸರಗೋಡು ಕನ್ನಡ ಗ್ರಾಮದಲ್ಲಿ 8ನೇ ಕೇರಳ ರಾಜ್ಯ ಕನ್ನಡ ಸಮ್ಮೇಳನ-2026

ನವೆಂಬರ್ 7 ಮತ್ತು 8ರಂದು ಕೇರಳ-ಕರ್ನಾಟಕ ಉತ್ಸವ, ಕನ್ನಡ ರಾಜ್ಯೋತ್ಸವ ಸಂಭ್ರಮ

ಕಾಸರಗೋಡು, ಜೂನ್ 9: ಕೇರಳ ರಾಜ್ಯದ ಕನ್ನಡ ಭಾಷಾ ಅಲ್ಪಸಂಖ್ಯಾತರ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ ಗ್ರಾಮ, ಕಾಸರಗೋಡು ಇದರ ನೇತೃತ್ವದಲ್ಲಿ 2026ರ ನವೆಂಬರ್ 7 ಮತ್ತು 8ರಂದು ಕಾಸರಗೋಡಿನ ಮೀಪುಗುರಿ-ಪಾರೆಕಟ್ಟೆಯ ಕನ್ನಡ ಗ್ರಾಮದಲ್ಲಿ ಐತಿಹಾಸಿಕ 8ನೇ ಕೇರಳ ರಾಜ್ಯ ಕನ್ನಡ ಸಮ್ಮೇಳನ-2026, ಕೇರಳ-ಕರ್ನಾಟಕ ಉತ್ಸವ ಹಾಗೂ ಕೇರಳ-ಕರ್ನಾಟಕ ಕನ್ನಡ ರಾಜ್ಯೋತ್ಸವವನ್ನು ಆಯೋಜಿಸಲಾಗಿದೆ.

ಕಳೆದ 36 ವರ್ಷಗಳಿಂದ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಇತಿಹಾಸ ಪರಂಪರೆಯನ್ನು ಅಂತರರಾಜ್ಯ ಮಟ್ಟದಲ್ಲಿ ಪರಿಚಯಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನವು ಈ ಸಮ್ಮೇಳನವನ್ನು ಹಮ್ಮಿಕೊಂಡಿದೆ. ಕೇರಳ, ಕರ್ನಾಟಕ ಸೇರಿದಂತೆ ದೇಶ-ವಿದೇಶಗಳ ಕನ್ನಡಿಗರು, ಸಾಹಿತಿಗಳು, ಕಲಾವಿದರು, ಸಂಶೋಧಕರು ಹಾಗೂ ಕನ್ನಡಪರ ಸಂಘಟನೆಗಳ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

ಸಮ್ಮೇಳನದಲ್ಲಿ ಉದ್ಘಾಟನಾ ಸಮಾರಂಭ, ವಿವಿಧ ಕಲಾ, ಪುಸ್ತಕ ಹಾಗೂ ವಸ್ತು ಪ್ರದರ್ಶನಗಳ ಉದ್ಘಾಟನೆ, ಹೊಸ ಕೃತಿಗಳ ಬಿಡುಗಡೆ, ಸ್ಮರಣ ಸಂಚಿಕೆ ಅನಾವರಣ, ರಾಜ್ಯಮಟ್ಟದ ಬಹುಭಾಷಾ ಕವಿಗೋಷ್ಠಿ, ಚುಟುಕು ಕವಿಗೋಷ್ಠಿ, ಮಕ್ಕಳ ಕವಿಗೋಷ್ಠಿ, ಭಾಷಾ ಬಾಂಧವ್ಯ ಗೋಷ್ಠಿ, ಹಾಸ್ಯ ಗೋಷ್ಠಿ, ಮಾಧ್ಯಮ ಗೋಷ್ಠಿ ಹಾಗೂ ಗಡಿನಾಡು-ಹೊರನಾಡು ಕನ್ನಡಿಗರು ಮತ್ತು ಕನ್ನಡ ಸಂಘಟನೆಗಳ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವ್ಯಕ್ತಿಗಳಿಗೆ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ರಾಷ್ಟ್ರೀಯ, ರಾಜ್ಯ, ಸಾಹಿತ್ಯ, ಕಾವ್ಯ, ಮಾಧ್ಯಮ, ಸಮಾಜಸೇವೆ, ಕ್ರೀಡೆ, ಬ್ಯಾಂಕಿಂಗ್, ಚಲನಚಿತ್ರ, ಕೃಷಿ, ಚಿತ್ರಕಲೆ, ಉದ್ಯಮ, ವೈದ್ಯಕೀಯ, ಯಕ್ಷಗಾನ, ಸರ್ಕಾರಿ ಸೇವೆ ಹಾಗೂ ಜನಪ್ರತಿನಿಧಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.

ಸಮ್ಮೇಳನದ ಅಂಗವಾಗಿ ಕೇರಳ ಮತ್ತು ಕರ್ನಾಟಕ ರಾಜ್ಯಗಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾನಪದ ನೃತ್ಯ, ಭರತನಾಟ್ಯ, ಸುಗಮ ಸಂಗೀತ, ದಾಸ ಸಂಕೀರ್ತನೆ, ಭಾವಗೀತೆ, ಸಮೂಹ ಗಾಯನ, ನೃತ್ಯ ರೂಪಕ, ನಾಟಕಗಳು ಹಾಗೂ ವಿವಿಧ ಜನಪದ ಕಲಾಪ್ರಕಾರಗಳ ಪ್ರದರ್ಶನ ನಡೆಯಲಿದೆ. ಖ್ಯಾತ ಕಲಾವಿದರಿಂದ ಚಿತ್ರಕಲಾ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಗಳೂ ಆಯೋಜಿಸಲಾಗಿವೆ.

ಕನ್ನಡ ಗ್ರಾಮದ ಸಮ್ಮೇಳನ ಸಭಾಂಗಣದ ಅಂಗಳದಲ್ಲಿ ಪುಸ್ತಕ ಮೇಳ, ವಸ್ತು ಪ್ರದರ್ಶನ, ವ್ಯಂಗ್ಯಚಿತ್ರ, ಛಾಯಾಚಿತ್ರ ಹಾಗೂ ಚಿತ್ರಕಲಾ ಪ್ರದರ್ಶನಗಳನ್ನು ಏರ್ಪಡಿಸಲಾಗಿದ್ದು, ವಿವಿಧ ಉದ್ಯಮ, ಬ್ಯಾಂಕಿಂಗ್, ಗ್ರಾಮೀಣಾಭಿವೃದ್ಧಿ, ಖಾದಿ, ಕೃಷಿ, ಸ್ವ-ಉದ್ಯೋಗ ಸಂಸ್ಥೆಗಳ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳಿಗೂ ಅವಕಾಶ ಕಲ್ಪಿಸಲಾಗಿದೆ.

ಸಮ್ಮೇಳನದಲ್ಲಿ ಕೇರಳ, ಕರ್ನಾಟಕ ಹಾಗೂ ದೇಶದ ವಿವಿಧ ರಾಜ್ಯಗಳಿಂದ ಸುಮಾರು 500ಕ್ಕೂ ಅಧಿಕ ಪ್ರತಿನಿಧಿಗಳ ಸಾಂಸ್ಕೃತಿಕ ನಿಯೋಗ ಭಾಗವಹಿಸುವ ನಿರೀಕ್ಷೆಯಿದೆ. ಗಲ್ಫ್ ರಾಷ್ಟ್ರಗಳು ಸೇರಿದಂತೆ ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಕನ್ನಡಿಗರು ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಪ್ರತಿನಿಧಿಗಳೂ ಪಾಲ್ಗೊಳ್ಳಲಿದ್ದಾರೆ.

ಕೇರಳ ಮತ್ತು ಕರ್ನಾಟಕ ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರು, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಅಕಾಡೆಮಿ, ಪ್ರಾಧಿಕಾರ ಹಾಗೂ ನಿಗಮಗಳ ಅಧ್ಯಕ್ಷರು ಮತ್ತು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವ ನಿರೀಕ್ಷೆಯಿದೆ.

ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ ಎರಡು ದಿನಗಳ ಊಟ ಮತ್ತು ಉಪಹಾರದ ವ್ಯವಸ್ಥೆ ಮಾಡಲಾಗಿದ್ದು, ಹೊರರಾಜ್ಯದ ಅತಿಥಿಗಳಿಗೆ ಸ್ಥಳೀಯ ಶಾಲೆ, ಕಾಲೇಜು, ದೇವಸ್ಥಾನ, ಮಠ, ಆಶ್ರಮ ಹಾಗೂ ಸಭಾಭವನಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಸಮ್ಮೇಳನದ ಸವಿ ನೆನಪಿಗಾಗಿ ಕೇರಳ ರಾಜ್ಯದ ಕನ್ನಡ ಸಂಘಟನೆಗಳು, ಶಾಲಾ-ಕಾಲೇಜುಗಳು, ಮಾಧ್ಯಮಗಳು, ಪ್ರವಾಸಿ ತಾಣಗಳು, ದೇವಸ್ಥಾನಗಳು, ಮಠಗಳು, ಬ್ಯಾಂಕುಗಳು, ಆಸ್ಪತ್ರೆಗಳು ಹಾಗೂ ವಿವಿಧ ಮಾಹಿತಿ ಸಂಗ್ರಹಗಳನ್ನು ಒಳಗೊಂಡ ವಿಶೇಷ ಸ್ಮರಣ ಸಂಚಿಕೆಯನ್ನು ಪ್ರಕಟಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!