ಧರ್ಮಗಳಲ್ಲ, ಧರ್ಮವನ್ನು ದುರುಪಯೋಗಪಡಿಸಿಕೊಂಡು ಸಮಾಜ ವಿಭಜಿಸುವವರ ವಿರುದ್ಧ ವಿರೋಧ: ದೀಪಾ ಭಾಸ್ತಿ

ಮಂಗಳೂರು: ಹಿಂದೂ, ಕ್ರೈಸ್ತ, ಮುಸ್ಲಿಂ ಸೇರಿದಂತೆ ಯಾವುದೇ ಧರ್ಮಗಳು ಸಮಸ್ಯೆಯಲ್ಲ. ಆದರೆ ಕೆಲವರು ಧರ್ಮವನ್ನು ಅಸ್ತ್ರವನ್ನಾಗಿ ಬಳಸಿಕೊಂಡು ಸಮಾಜವನ್ನು ವಿಭಜಿಸುವ ಪ್ರಯತ್ನ ನಡೆಸುತ್ತಿರುವುದರ ವಿರುದ್ಧ ನನ್ನ ವಿರೋಧವಿದೆ ಎಂದು ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಹಾಗೂ ಲೇಖಕಿ ದೀಪಾ ಭಾಸ್ತಿ ಹೇಳಿದ್ದಾರೆ.

ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ ಮಂಗಳವಾರ ಪಿ.ಪಿ. ಗೋಮತಿ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್, ಮಂಗಳೂರು ವಿಶ್ವವಿದ್ಯಾನಿಲಯ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ಪಿ.ಪಿ. ಗೋಮತಿ ಸ್ಮಾರಕ ವಾರ್ಷಿಕ ಉಪನ್ಯಾಸ ಕಾರ್ಯಕ್ರಮದ ಬಳಿಕ ನಡೆದ ಸಂವಾದದಲ್ಲಿ ಅವರು ಮಾತನಾಡಿದರು.

“ಯಾವುದೇ ಧರ್ಮದ ಬಗ್ಗೆ ನನಗೆ ಆಕ್ಷೇಪವಿಲ್ಲ. ಹಿಂದೂ ಧರ್ಮದ ವೇದಗಳು, ಸಂಸ್ಕೃತ ಸೇರಿದಂತೆ ಅದರ ಪರಂಪರೆ ಮತ್ತು ಮೌಲ್ಯಗಳು ಉತ್ತಮವಾಗಿವೆ. ಅವುಗಳನ್ನು ನಾನು ಎಂದಿಗೂ ತಪ್ಪು ಎಂದು ಹೇಳಿಲ್ಲ, ಮುಂದೆಯೂ ಹೇಳುವುದಿಲ್ಲ,” ಎಂದು ಅವರು ಸ್ಪಷ್ಟಪಡಿಸಿದರು.

ಧರ್ಮದ ಹೆಸರಿನಲ್ಲಿ ಅದರ ದುರುಪಯೋಗ ಮಾಡುವವರ ಬಗ್ಗೆ ಮಾತ್ರ ತಮ್ಮ ಭಿನ್ನಾಭಿಪ್ರಾಯವಿದೆ ಎಂದು ತಿಳಿಸಿದ ಅವರು, “ಈ ಮಾತು ಧರ್ಮಗಳಿಗೆ ಮಾತ್ರವಲ್ಲ, ಭಾಷೆಗಳು, ರಾಜಕೀಯ ಪಕ್ಷಗಳು ಹಾಗೂ ರಾಜಕೀಯ ವ್ಯವಸ್ಥೆಗಳಿಗೂ ಅನ್ವಯಿಸುತ್ತದೆ. ಮೂಲ ತತ್ವಗಳು ಮತ್ತು ಅವುಗಳ ದುರುಪಯೋಗದ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕು,” ಎಂದರು.

ಕಾರ್ಯಕ್ರಮದಲ್ಲಿ ಪ್ರಶ್ನೆ ಕೇಳಿದ ಡಾ. ಪ್ರಭಾಕರ ಜೋಶಿ, ಬಹುತ್ವವನ್ನು ಹೊಗಳುವವರು ಕೆಲವೊಮ್ಮೆ ಹಿಂದೂ ಧರ್ಮ, ಸಂಸ್ಕೃತ ಹಾಗೂ ಹಿಂದಿ ಭಾಷೆಗಳ ವಿರುದ್ಧ ನಿಲುವು ತಾಳುವ ಕುರಿತು ಪ್ರಶ್ನೆ ಎತ್ತಿದರು. ಇದಕ್ಕೆ ಉತ್ತರಿಸಿದ ದೀಪಾ ಭಾಸ್ತಿ, “ಭಿನ್ನಾಭಿಪ್ರಾಯ, ಸುಧಾರಣೆ ಹಾಗೂ ಸ್ವತಂತ್ರ ಚಿಂತನೆಯ ಪರಂಪರೆ ವೇದಗಳ ಕಾಲದಿಂದಲೇ ನಮ್ಮ ಸಮಾಜದಲ್ಲಿದೆ. ಬಹುತ್ವದ ಮೌಲ್ಯವನ್ನು ಎಲ್ಲ ಕ್ಷೇತ್ರಗಳಲ್ಲಿಯೂ ಸಮಾನವಾಗಿ ಗೌರವಿಸುವ ಅಗತ್ಯವಿದೆ,” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಪಿ.ಪಿ. ಗೋಮತಿ ಮೆಮೋರಿಯಲ್ ಟ್ರಸ್ಟ್‌ನ ಬಂಬಿನ ಚಿನ್ನಮ್ಮ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಉಪಸ್ಥಿತರಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ವೈದ್ಯ ಹಾಗೂ ಕಾರ್ಯಕ್ರಮ ಸಂಯೋಜಕ ಡಾ. ಶ್ರೀನಿವಾಸ ಕಕ್ಕಿಲಾಯ ಸ್ವಾಗತಿಸಿದರು. ಪುಷ್ಪಾ ಎಸ್. ಕಾರಂತ್ ನಾಡಗೀತೆ ಹಾಡಿದರು. ಮೀರಾ ಅರಾನ್ಹ ಪಿ.ಪಿ. ಗೋಮತಿ ಅವರ ಪರಿಚಯ ನೀಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಶ್ರೀನಾಥ್ ಎಂ.ಪಿ. ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!