ಕೊರಗ ಜನಾಂಗದ ಸಮಸ್ಯೆಗಳಿಗೆ ಶೀಘ್ರ ಪರಿಹಾರಕ್ಕೆ ಆಗ್ರಹ: ತಹಶೀಲ್ದಾರ್ ಗೈರಿಗೆ ಸಭೆಯಲ್ಲಿ ಆಕ್ರೋಶ

ಬಂಟ್ವಾಳ, ಜೂ.11: ಆದಿವಾಸಿ ಕೊರಗ ಜನಾಂಗದವರ ತಾಲೂಕು ಮಟ್ಟದ ಅಭಿವೃದ್ಧಿ ಸಮಿತಿ ಸಭೆಯು ತಾ.ಪಂ. ಕಾರ್ಯನಿರ್ವಹಣಾಧಿಕಾರಿ (ಇ.ಒ.) ಸಚಿನ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಬಿಸಿರೋಡಿನ ತಾಲೂಕು ಪಂಚಾಯತ್ ಎಸ್.ಜಿ.ಎಸ್.ವೈ. ಸಭಾಂಗಣದಲ್ಲಿ ನಡೆಯಿತು.

ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ವಿನಯ ಕುಮಾರಿ ಅವರ ಉಪಸ್ಥಿತಿಯಲ್ಲಿ ವಿವಿಧ ಇಲಾಖೆಗಳ ಯೋಜನೆಗಳು ಮತ್ತು ಕೊರಗ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆ ನಡೆಯಿತು.

ಕೊರಗ ಜನಾಂಗಕ್ಕೆ ಸರ್ಕಾರದಿಂದ ಹಲವು ಯೋಜನೆಗಳಿದ್ದರೂ, ಮಾಹಿತಿ ಕೊರತೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವು ಕಟ್ಟಕಡೆಯ ಫಲಾನುಭವಿಗಳಿಗೂ ತಲುಪುತ್ತಿಲ್ಲ ಎಂದು ಸಮುದಾಯದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ವಿಶೇಷವಾಗಿ ಭೂಮಿ ದಾಖಲೆಗಳ ಕೊರತೆಯಿಂದ ಕೊರಗ ಕುಟುಂಬಗಳು ಸರ್ಕಾರದ ಅನೇಕ ಯೋಜನೆಗಳಿಂದ ವಂಚಿತರಾಗುತ್ತಿದ್ದು, ಅವರು ವಾಸಿಸುತ್ತಿರುವ ಜಾಗವನ್ನು ಅವರ ಹೆಸರಿಗೆ ಮಂಜೂರು ಮಾಡಿಕೊಡುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಸಮಸ್ಯೆ ಬಗೆಹರಿದಿಲ್ಲ ಎಂದು ತಿಳಿಸಿದರು.

ಕಂದಾಯ ಹಾಗೂ ಭೂಮಿಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕೆ ತಹಶೀಲ್ದಾರ್ ಸಭೆಗೆ ಹಾಜರಾಗದಿರುವುದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಯಿತು. ತಹಶೀಲ್ದಾರ್ ಮಂಜುನಾಥ್ ಅವರು ದಿನಾಂಕ ನಿಗದಿ ಮಾಡಿ ಆ ದಿನವೇ ಸಭೆ ನಡೆಸುವಂತೆ ಸಭೆಯಲ್ಲಿ ಆಗ್ರಹಿಸಲಾಯಿತು. ಕಚೇರಿಗೆ ಹೋದರೂ ಅಧಿಕಾರಿಗಳನ್ನು ಭೇಟಿ ಮಾಡಲು ಅವಕಾಶ ಸಿಗುತ್ತಿಲ್ಲ ಎಂದು ಆರೋಪಿಸಲಾಯಿತು.

ಕೊರಗ ಸಮುದಾಯವು ಅತ್ಯಂತ ಹಿಂದುಳಿದ ಮತ್ತು ಸೂಕ್ಷ್ಮ ಸಮಾಜವಾಗಿದ್ದು, ಅವರನ್ನು ಮುಖ್ಯವಾಹಿನಿಗೆ ತರಲು ಅಂಗನವಾಡಿ, ಆರೋಗ್ಯ ಇಲಾಖೆ ಹಾಗೂ ಗ್ರಾಮ ಪಂಚಾಯತ್‌ಗಳ ಮೂಲಕ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚಿಸಬೇಕು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಕೇಂದ್ರ ಸರ್ಕಾರದ ಆರೋಗ್ಯ ಸೇವಾ ಯೋಜನೆಯಡಿ ವೈದ್ಯರ ತಂಡ ಮನೆಬಾಗಿಲಿಗೆ ಬರುವ ವ್ಯವಸ್ಥೆ ಇದ್ದರೂ ಅಗತ್ಯ ಔಷಧಗಳ ಕೊರತೆ ಇರುವುದರಿಂದ ಸಮರ್ಪಕ ಪ್ರಯೋಜನ ಸಿಗುತ್ತಿಲ್ಲ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಯೋಜನೆಗಳ ಕುರಿತು ಮಾಹಿತಿ ನೀಡಿದ ತೋಟಗಾರಿಕೆ ಸಹಾಯಕ ನಿರ್ದೇಶಕ ಪ್ರದೀಪ್ ಡಿ.ಸೋಜ, ಜಮೀನು ಇಲ್ಲದ ಕುಟುಂಬಗಳು ಜೇನು ಕೃಷಿ ಸೇರಿದಂತೆ ವಿವಿಧ ಯೋಜನೆಗಳ ಪ್ರಯೋಜನ ಪಡೆಯಬಹುದು ಎಂದು ತಿಳಿಸಿದರು.

ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ದಿಂಡಿಕೆರೆ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಮೂರು ದಿನಗಳಿಗೊಮ್ಮೆ ಮಾತ್ರ ನೀರು ಪೂರೈಕೆಯಾಗುತ್ತಿದೆ ಎಂದು ಸ್ಥಳೀಯರು ಅಧಿಕಾರಿಗಳ ಗಮನಕ್ಕೆ ತಂದರು.

ಬೆಳಗ್ಗೆ 10.30ಕ್ಕೆ ಆರಂಭವಾಗಬೇಕಿದ್ದ ಸಭೆ ಸುಮಾರು 50 ನಿಮಿಷ ತಡವಾಗಿ ಆರಂಭಗೊಂಡಿತು. ಇ.ಒ. ಸಚಿನ್ ಕುಮಾರ್ ಅವರ ತಡ ಆಗಮನ ಹಾಗೂ ತಹಶೀಲ್ದಾರ್ ಗೈರುಹಾಜರಿಯಿಂದ ಕಾದು ಕುಳಿತಿದ್ದ ಕೊರಗ ಸಮುದಾಯದ ಸದಸ್ಯರು ಸಭೆಯಲ್ಲಿ ಅಸಮಾಧಾನ ಮತ್ತು ಆಕ್ರೋಶ ವ್ಯಕ್ತಪಡಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!