ಬಂಟ್ವಾಳ ಆಡಳಿತ ಸೌಧದ ಲಿಪ್ಟ್‌ನಲ್ಲಿ 45 ನಿಮಿಷ ಸಿಲುಕಿದ ಸಾರ್ವಜನಿಕರು: ತಪ್ಪಿದ ಭಾರೀ ಅನಾಹುತ

ಬಂಟ್ವಾಳ, ಜೂ.11: ಬಂಟ್ವಾಳ ಆಡಳಿತ ಸೌಧದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಅಳವಡಿಸಲಾಗಿರುವ ಲಿಪ್ಟ್‌ನಲ್ಲಿ ಇಬ್ಬರು ವ್ಯಕ್ತಿಗಳು ಸುಮಾರು 45 ನಿಮಿಷಗಳ ಕಾಲ ಸಿಲುಕಿಕೊಂಡು ಆತಂಕದ ಕ್ಷಣಗಳನ್ನು ಅನುಭವಿಸಿದ ಘಟನೆ ಮಧ್ಯಾಹ್ನ ನಡೆದಿದೆ.

ಆಡಳಿತ ಸೌಧದ ಮೇಲಿನ ಮೂರು ಅಂತಸ್ತುಗಳಿಗೆ ತೆರಳಲು ಸಾರ್ವಜನಿಕರು ಲಿಪ್ಟ್ ಬಳಸುತ್ತಿದ್ದು, ಮಧ್ಯಾಹ್ನ ಸುಮಾರು 12.45ರಿಂದ 1.30ರ ಅವಧಿಯಲ್ಲಿ ಕಚೇರಿ ಕೆಲಸಕ್ಕೆ ಬಂದಿದ್ದ ಇಬ್ಬರು ಲಿಪ್ಟ್ ಒಳಗೆ ಸಿಲುಕಿಕೊಂಡಿದ್ದರು.

ಲಿಪ್ಟ್‌ನೊಳಗಿದ್ದ ವ್ಯಕ್ತಿಗಳು ಮೊಬೈಲ್ ಮೂಲಕ ತಮ್ಮ ಸ್ನೇಹಿತರಿಗೆ ಮಾಹಿತಿ ನೀಡಿದ್ದು, ಬಳಿಕ ಅವರು ತಹಶೀಲ್ದಾರ್ ಅವರನ್ನು ಸಂಪರ್ಕಿಸಿದ್ದಾರೆ. ಸುಮಾರು 45 ನಿಮಿಷಗಳ ಕಾಲ ಲಿಪ್ಟ್‌ನಲ್ಲಿ ಸಿಲುಕಿದ್ದ ಇಬ್ಬರನ್ನು ಸಾರ್ವಜನಿಕರ ಸಹಾಯದಿಂದ ಸುರಕ್ಷಿತವಾಗಿ ಹೊರಗೆ ಕರೆತರಲಾಯಿತು. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಇದು ಮೊದಲ ಬಾರಿಯ ಘಟನೆಯಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದು, ಈ ಹಿಂದೆಯೂ ಹಲವು ಬಾರಿ ಲಿಪ್ಟ್ ದೋಷದಿಂದ ಇಂತಹ ಪರಿಸ್ಥಿತಿ ಉಂಟಾಗಿತ್ತು ಎಂದು ತಿಳಿಸಿದ್ದಾರೆ. ಲಿಪ್ಟ್ ಅಳವಡಿಸಿದ ಎರಡನೇ ದಿನವೇ ಇದೇ ರೀತಿಯ ಘಟನೆ ನಡೆದಿತ್ತು ಎಂದು ಸಿಬ್ಬಂದಿ ನೆನಪಿಸಿಕೊಂಡಿದ್ದಾರೆ.

ಪದೇ ಪದೇ ತಾಂತ್ರಿಕ ದೋಷಗಳು ಮರುಕಳಿಸುತ್ತಿದ್ದರೂ ಸಂಬಂಧಿಸಿದ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಗಂಭೀರ ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಹಿರಿಯ ನಾಗರಿಕರು, ಮಕ್ಕಳು ಹಾಗೂ ಅನಾರೋಗ್ಯ ಪೀಡಿತರು ಲಿಪ್ಟ್‌ನಲ್ಲಿ ಸಿಲುಕಿಕೊಂಡರೆ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುವುದರಿಂದ, ತಕ್ಷಣ ಲಿಪ್ಟ್‌ನ ತಾಂತ್ರಿಕ ದೋಷಗಳನ್ನು ಸರಿಪಡಿಸಿ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಘಟನೆಯಲ್ಲಿ ಸಿಲುಕಿದ್ದವರು ಆಗ್ರಹಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!