ಮಂಗಳೂರು, ಜೂನ್ 12: ಜನನ ಮತ್ತು ಮರಣ ಪ್ರಮಾಣ ಪತ್ರಗಳ ವಿತರಣೆಯಲ್ಲಿ ಉಂಟಾಗುತ್ತಿರುವ ವಿಳಂಬ ಹಾಗೂ ಇದರಿಂದ ಸಾರ್ವಜನಿಕರು ಎದುರಿಸುತ್ತಿರುವ ತೊಂದರೆಗಳ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ನಿಯೋಗವು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಪ್ರಮಾಣ ಪತ್ರಗಳಿಗಾಗಿ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು, ಪಾಸ್ಪೋರ್ಟ್ ಅರ್ಜಿದಾರರು ಸೇರಿದಂತೆ ಅನೇಕ ನಾಗರಿಕರು ಅನಗತ್ಯವಾಗಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದನ್ನು ನಿಯೋಗವು ಆಯುಕ್ತರ ಗಮನಕ್ಕೆ ತಂದಿತು. ಜನನ ಮತ್ತು ಮರಣ ಪ್ರಮಾಣ ಪತ್ರಗಳು ನಾಗರಿಕರ ಅಗತ್ಯ ದಾಖಲೆಗಳಾಗಿರುವುದರಿಂದ ಅವುಗಳನ್ನು ವಿಳಂಬವಿಲ್ಲದೆ ಶೀಘ್ರವಾಗಿ ವಿತರಿಸಬೇಕು ಎಂದು ಒತ್ತಾಯಿಸಲಾಯಿತು.
ಬಾಕಿ ಇರುವ ಅರ್ಜಿಗಳನ್ನು ಆದ್ಯತೆಯ ಮೇರೆಗೆ ವಿಲೇವಾರಿ ಮಾಡಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಯುವ ಕಾಂಗ್ರೆಸ್ ಮನವಿ ಮಾಡಿತು. ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸುವ ಭರವಸೆಯನ್ನು ಮಹಾನಗರ ಪಾಲಿಕೆ ಆಯುಕ್ತರು ನೀಡಿದರು.
ಆದಾಗ್ಯೂ, ಸಮಸ್ಯೆ ಮುಂದುವರಿದು ಸಾರ್ವಜನಿಕರಿಗೆ ನ್ಯಾಯ ದೊರೆಯದಿದ್ದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಾರ್ವಜನಿಕರೊಂದಿಗೆ ಸೇರಿ ಹೋರಾಟದ ಮಾರ್ಗವನ್ನು ಅನುಸರಿಸಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.