ಮಂಗಳೂರು, ಜೂ.12: ಪೂಜಾ ಆಚಾರ್ಯ ಹಾಗೂ ಕೃಷ್ಣ ಜೆ. ರಾವ್ ನಡುವಿನ ವಿವಾದಿತ ಪ್ರಕರಣಕ್ಕೆ ಸಂಧಾನದ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳು ನಡೆಯುತ್ತಿದ್ದು, ಜೂನ್ 19ರಂದು ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆಯಲಿರುವ ಮಧ್ಯಸ್ಥಿಕೆ (ಮೀಡಿಯೇಶನ್) ಸಭೆಯ ಮೂಲಕ ಪ್ರಕರಣ ಸುಖಾಂತ್ಯ ಕಾಣುವ ವಿಶ್ವಾಸವಿದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ. ನಂಜುಂಡಿ ತಿಳಿಸಿದ್ದಾರೆ. ಅಂದೇ ಮಗುವಿನ ನಾಮಕರಣ ಕಾರ್ಯಕ್ರಮ ನಡೆಯುವ ಸಾಧ್ಯತೆಯೂ ಇದೆ ಎಂದು ಅವರು ಹೇಳಿದ್ದಾರೆ.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮದುವೆಗೆ ಕೃಷ್ಣ ಜೆ. ರಾವ್ ಹಾಗೂ ಅವರ ಕುಟುಂಬ ನಿರಾಕರಿಸಿದ ಹಿನ್ನೆಲೆಯಲ್ಲಿ ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಲಾಗಿತ್ತು ಎಂದು ತಿಳಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಹಲವು ಕಾನೂನು ಹೋರಾಟಗಳು ನಡೆದಿದ್ದು, ಕಳೆದ ತಿಂಗಳು ಮಗು ಮತ್ತು ತಾಯಿಯ ಆರೈಕೆಗಾಗಿ ಪ್ರತಿ ತಿಂಗಳು ₹75 ಸಾವಿರ ನೀಡುವಂತೆ ನ್ಯಾಯಾಲಯ ಆದೇಶಿಸಿತ್ತು ಎಂದು ಹೇಳಿದರು.
ನಿಗದಿತ ಅವಧಿಯಲ್ಲಿ ಹಣ ಪಾವತಿಯಾಗದ ಹಿನ್ನೆಲೆಯಲ್ಲಿ ವಿಷಯವನ್ನು ಮತ್ತೆ ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು. ಇತ್ತೀಚಿನ ವಿಚಾರಣೆ ವೇಳೆ ಆರೋಪಿಗಳ ಪರ ವಕೀಲರು ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿದ್ದು, ನ್ಯಾಯಾಲಯ ಅದಕ್ಕೆ ಅವಕಾಶ ಕಲ್ಪಿಸಿದೆ ಎಂದು ನಂಜುಂಡಿ ತಿಳಿಸಿದರು.
ಈ ವೇಳೆ ಈಗಾಗಲೇ ಠೇವಣಿ ಇರಿಸಲಾಗಿದ್ದ ₹75 ಸಾವಿರ ಬಿಡುಗಡೆ ಮಾಡುವಂತೆ ಹಾಗೂ ನಾಲ್ಕು ದಿನಗಳೊಳಗೆ ಮತ್ತೊಂದು ₹75 ಸಾವಿರವನ್ನು ಮಗು ಮತ್ತು ತಾಯಿಯ ಖಾತೆಗೆ ಜಮಾ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ. ಜೂನ್ 19ರಂದು ಹಿರಿಯ ವಕೀಲೆ ಸುಶೀಲ ಅವರ ಸಮ್ಮುಖದಲ್ಲಿ ಮಧ್ಯಸ್ಥಿಕೆ ಸಭೆ ನಡೆಯಲಿದ್ದು, ಜೂನ್ 30ರಂದು ಮುಂದಿನ ವಿಚಾರಣೆಗೆ ದಿನಾಂಕ ನಿಗದಿಯಾಗಿದೆ ಎಂದು ಅವರು ಹೇಳಿದರು.
ಪೂಜಾ ಆಚಾರ್ಯರಿಗೆ ನ್ಯಾಯ ದೊರಕಬೇಕು ಹಾಗೂ ಅವರ ಕುಟುಂಬ ಜೀವನ ಸುಗಮವಾಗಬೇಕು ಎಂಬುದು ನಮ್ಮ ಆಶಯವಾಗಿದೆ. ಆರಂಭದಿಂದಲೂ ಇದೇ ನಮ್ಮ ನಿಲುವಾಗಿದ್ದು, ಇಂದಿಗೂ ಅದನ್ನು ಮುಂದುವರಿಸಿಕೊಂಡು ಬಂದಿದ್ದೇವೆ ಎಂದು ನಂಜುಂಡಿ ಹೇಳಿದರು.
ಕೃಷ್ಣ ಜೆ. ರಾವ್ ಹಾಗೂ ಅವರ ಕುಟುಂಬ ಸಂಧಾನದತ್ತ ಹೆಜ್ಜೆ ಇಟ್ಟಿರುವುದು ಸ್ವಾಗತಾರ್ಹ ಬೆಳವಣಿಗೆ. ಎಲ್ಲರ ಒಮ್ಮತದ ನಿರ್ಧಾರದಿಂದ ಪ್ರಕರಣಕ್ಕೆ ಸೂಕ್ತ ಪರಿಹಾರ ದೊರೆಯುವ ವಿಶ್ವಾಸವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಪತ್ರಿಕಾಗೋಷ್ಠಿಯಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಮುಖಂಡರಾದ ಲಗ್ಗರೆ ರವಿಕುಮಾರ್, ಜನಾರ್ದನ ಆಚಾರ್ಯ, ಲೋಕೇಶ್ ಕಿಟ್ಟಣ್ಣಿ, ಜಗದೀಶ್ ವೀಣೆ, ಉಡುಪಿ ಜಿಲ್ಲಾ ಉಪಾಧ್ಯಕ್ಷ ಗಂಗಾಧರ ಆಚಾರ್ಯ, ಗೋಪಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.