ಮಂಗಳೂರು, ಜೂನ್ 13: ಬಾಲಕಾರ್ಮಿಕ ಎಂಬ ಸಾಮಾಜಿಕ ಪಿಡುಗನ್ನು ಸಂಪೂರ್ಣ ನಿರ್ಮೂಲನೆಗೊಳಿಸಲು ಸಮಾಜದ ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ಕೈಜೋಡಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಜೈಬುನ್ನೀಸಾ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು ಮಹಾನಗರಪಾಲಿಕೆ, ಕಾರ್ಮಿಕ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಾಲಕಾರ್ಮಿಕ ನಿರ್ಮೂಲನೆ ಕುರಿತ ಜಾಗೃತಿ ಕಾರ್ಯಕ್ರಮಗಳು ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ನಿರಂತರ ಜನಜಾಗೃತಿ ಮತ್ತು ಹೋರಾಟದ ಮೂಲಕವೇ ಈ ಅನಿಷ್ಠ ಪದ್ಧತಿಯನ್ನು ತೊಲಗಿಸಲು ಸಾಧ್ಯ ಎಂದು ಅವರು ಹೇಳಿದರು. ಬಾಲಕಾರ್ಮಿಕರು ಕಂಡುಬಂದರೆ ಕಾರ್ಮಿಕ ಇಲಾಖೆಗೆ ಮಾಹಿತಿ ನೀಡುವ ಮೂಲಕ ಪ್ರತಿಯೊಬ್ಬರೂ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಕರೆ ನೀಡಿದರು.
ಮಕ್ಕಳ ಬಾಲ್ಯವು ಜೀವನದ ಸುವರ್ಣ ಕಾಲವಾಗಿದ್ದು, ಅವರನ್ನು ದುಡಿಮೆಗೆ ತೊಡಗಿಸುವುದರಿಂದ ಅವರ ದೈಹಿಕ, ಮಾನಸಿಕ ಮತ್ತು ಶೈಕ್ಷಣಿಕ ಬೆಳವಣಿಗೆಗೆ ತೀವ್ರ ಹಾನಿಯಾಗುತ್ತದೆ ಎಂದು ತಿಳಿಸಿದರು. ಅಸುರಕ್ಷಿತ ವಾತಾವರಣದಲ್ಲಿ ಕೆಲಸ ಮಾಡುವ ಮಕ್ಕಳು ಧೂಮಪಾನ, ಮದ್ಯಪಾನ ಹಾಗೂ ಮಾದಕ ವ್ಯಸನಗಳಂತಹ ದುಶ್ಚಟಗಳಿಗೆ ಒಳಗಾಗುವ ಸಾಧ್ಯತೆಗಳೂ ಹೆಚ್ಚಿವೆ ಎಂದರು.
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಕಾನೂನುಬಾಹಿರವಾಗಿದ್ದು, ತಪ್ಪಿತಸ್ಥರಿಗೆ ಸೆರೆ ಶಿಕ್ಷೆ ಹಾಗೂ ₹20 ಸಾವಿರದಿಂದ ₹50 ಸಾವಿರದವರೆಗೆ ದಂಡ ವಿಧಿಸಬಹುದು ಎಂದು ಎಚ್ಚರಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಜಯಲಕ್ಷ್ಮಿ ರಾಯಕೋಡ ಮಾತನಾಡಿ, ಮಕ್ಕಳನ್ನು ಜೀವನ ಕೌಶಲ್ಯ ಬೆಳೆಸುವ ಚಟುವಟಿಕೆಗಳಲ್ಲಿ ತೊಡಗಿಸಬೇಕೇ ಹೊರತು ಅಪಾಯಕಾರಿ ಹಾಗೂ ಆದಾಯ ಗಳಿಸುವ ಕೆಲಸಗಳಲ್ಲಿ ತೊಡಗಿಸಬಾರದು ಎಂದರು. ಬಾಲಕಾರ್ಮಿಕ ಪದ್ಧತಿ ಮಕ್ಕಳ ಭವಿಷ್ಯವನ್ನು ಕಸಿದುಕೊಳ್ಳುವ ಸಾಮಾಜಿಕ ಪಿಡುಗಾಗಿದ್ದು, ಇದರ ನಿರ್ಮೂಲನೆಗೆ ಪೋಷಕರ ಪಾತ್ರ ಅತ್ಯಂತ ಮುಖ್ಯ ಎಂದು ಹೇಳಿದರು.
ಸಹಾಯಕ ಕಾರ್ಮಿಕ ಆಯುಕ್ತೆ ನಾಜಿಯಾ ಸುಲ್ತಾನ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲ್‌ದಾಸ್ ನಾಯಕ್, ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆ ಉಪನಿರ್ದೇಶಕ ರಾಜೇಶ್ ಮಿಶ್ರಕೋಟಿ, ಪಡಿ ಸಂಸ್ಥೆಯ ನಿರ್ದೇಶಕ ರೆನ್ನಿ ಡಿಸೋಜಾ, ಡಿವೈಎಸ್ಪಿ ಮಂಜುನಾಥ್ ಆರ್.ಬಿ., ವಕೀಲರ ಸಂಘದ ಅಧ್ಯಕ್ಷ ಜಗದೀಶ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಎಸ್. ಶಶಿಧರ್, ಯೋಜನಾ ನಿರ್ದೇಶಕ ಶ್ರೀನಿವಾಸ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಉರ್ವಾಸ್ಟೋರ್‌ನಿಂದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಆವರಣದವರೆಗೆ ಜಾಗೃತಿ ಜಾಥಾ ನಡೆಯಿತು.