ಪುತ್ತೂರು: ಅಪಾಯಕಾರಿ ಸ್ಥಿತಿಯಲ್ಲಿದ್ದ ಶತಮಾನದ ಹಳೆಯ ಕಟ್ಟಡ ನೆಲಸಮ

ಪುತ್ತೂರು, ಜೂ.13: ಪುತ್ತೂರಿನ ಮುಖ್ಯ ರಸ್ತೆಯ ಮಹಿಳಾ ಠಾಣೆ ಎದುರು ಅಪಾಯಕಾರಿ ಸ್ಥಿತಿಯಲ್ಲಿದ್ದ ಶತಮಾನದ ಹಳೆಯ ಕಟ್ಟಡವನ್ನು ಗುರುವಾರ ಅಧಿಕಾರಿಗಳ ಸಮ್ಮುಖದಲ್ಲಿ ನೆಲಸಮಗೊಳಿಸಲಾಯಿತು.

ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಬಲ್ನಾಡು ದಂಡನಾಯಕ ಉಳ್ಳಾಲ್ತಿ ದೈವದ ಕಿರುವಾಳು ಭಂಡಾರ ಆಗಮಿಸುವ ವೇಳೆ ಸಂಚಾರ ಹಾಗೂ ಭಕ್ತರ ಓಡಾಟಕ್ಕೆ ಅಡಚಣೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಈ ಕಟ್ಟಡದ ಅರ್ಧ ಭಾಗವನ್ನು ಈ ಹಿಂದೆ ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಲಾಗಿತ್ತು. ಉಳಿದ ಭಾಗವನ್ನು ಹಾಗೆಯೇ ಬಿಡಲಾಗಿತ್ತು.

ಇತ್ತೀಚೆಗೆ ನಿರಂತರ ಮಳೆಯ ಪರಿಣಾಮ ಕಟ್ಟಡವು ಮತ್ತಷ್ಟು ಶಿಥಿಲಗೊಂಡು ಕುಸಿಯುವ ಹಂತ ತಲುಪಿತ್ತು. ಕೆಲ ದಿನಗಳ ಹಿಂದೆ ಸಂಜೆ ವೇಳೆ ಕಟ್ಟಡದ ಕಲ್ಲುಗಳು ಜರಿದು ಬಿದ್ದ ಘಟನೆ ನಡೆದಿದ್ದು, ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿತ್ತು.

ಸುರಕ್ಷತಾ ದೃಷ್ಟಿಯಿಂದ ಕಟ್ಟಡದ ಸುತ್ತ ಬ್ಯಾರಿಕೇಡ್ ಅಳವಡಿಸಿ, ಸಾರ್ವಜನಿಕರಿಗೆ ಎಚ್ಚರಿಕೆ ನೀಡುವ ಬ್ಯಾನರ್‌ಗಳನ್ನು ಹಾಕಲಾಗಿತ್ತು. ಪರಿಸ್ಥಿತಿಯನ್ನು ಪರಿಗಣಿಸಿ ಕಟ್ಟಡದ ಮಾಲಕರು, ಪೊಲೀಸರು ಹಾಗೂ ನಗರಸಭೆ ಅಧಿಕಾರಿಗಳ ಸಮ್ಮುಖದಲ್ಲಿ ಕಟ್ಟಡವನ್ನು ಸಂಪೂರ್ಣವಾಗಿ ತೆರವುಗೊಳಿಸಲಾಯಿತು.

ಕಟ್ಟಡ ತೆರವು ಕಾರ್ಯಾಚರಣೆಯಿಂದ ಸಾರ್ವಜನಿಕರ ಸುರಕ್ಷತೆಗೆ ಇದ್ದ ಅಪಾಯ ನಿವಾರಣೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!