ತುಳು ಅಭಿವೃದ್ಧಿ ನಿಗಮ ಸ್ಥಾಪನೆ, ಕಾರ್ಕಳದಲ್ಲಿ ತುಳು ಭವನ ನಿರ್ಮಾಣಕ್ಕೆ ಮನವಿ

ಬೆಂಗಳೂರು,ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು ಭಾಷೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸುವ ನಿಟ್ಟಿನಲ್ಲಿ ತುಳು ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವಂತೆ ಹಾಗೂ ಕಾರ್ಕಳದಲ್ಲಿ ಸುಸಜ್ಜಿತ ತುಳು ಭವನ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆಗೊಳಿಸುವಂತೆ ಕಾರ್ಕಳ ಕಾಂಗ್ರೆಸ್ ಮುಖಂಡ ಉದಯ್ ಶೆಟ್ಟಿ ಮುನಿಯಾಲ್ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಈ ಕುರಿತು ಮಾತನಾಡಿದ ಉದಯ್ ಶೆಟ್ಟಿ ಮುನಿಯಾಲ್, ತುಳು ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದ ವತಿಯಿಂದ ತುಳು ಅಭಿವೃದ್ಧಿ ಪ್ರಾಧಿಕಾರವನ್ನು ಶೀಘ್ರ ಸ್ಥಾಪಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ತುಳು ಭಾಷೆ ಲಕ್ಷಾಂತರ ಜನರ ಮಾತೃಭಾಷೆಯಾಗಿದ್ದು, ತುಳುನಾಡಿನ ಸಂಸ್ಕೃತಿ, ಪರಂಪರೆ ಮತ್ತು ಜೀವನ ಶೈಲಿಯ ಅವಿಭಾಜ್ಯ ಅಂಗವಾಗಿದೆ. ಜಾಗತೀಕರಣದ ಪರಿಣಾಮ ಪ್ರಾದೇಶಿಕ ಭಾಷೆಗಳ ಬಳಕೆ ಕುಗ್ಗುತ್ತಿರುವ ಸಂದರ್ಭದಲ್ಲಿ ತುಳು ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ವಿಶೇಷ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ತುಳು ಭಾಷೆಯ ಸಂರಕ್ಷಣೆ ಮತ್ತು ಪ್ರಚಾರ, ತುಳು ಸಾಹಿತ್ಯ, ಸಂಶೋಧನೆ ಹಾಗೂ ಪ್ರಕಟಣೆಗಳಿಗೆ ಉತ್ತೇಜನ, ಶಾಲೆ ಮತ್ತು ಕಾಲೇಜುಗಳಲ್ಲಿ ತುಳು ಅಧ್ಯಯನಕ್ಕೆ ಪ್ರೋತ್ಸಾಹ, ಯಕ್ಷಗಾನ, ಭೂತಾರಾಧನೆ, ನಾಗಾರಾಧನೆ ಸೇರಿದಂತೆ ತುಳುನಾಡಿನ ಸಾಂಸ್ಕೃತಿಕ ಪರಂಪರೆಗಳ ಸಂರಕ್ಷಣೆ ಹಾಗೂ ತುಳು ಭಾಷೆಗೆ ಹೆಚ್ಚಿನ ಶೈಕ್ಷಣಿಕ ಮತ್ತು ಸಾಂವಿಧಾನಿಕ ಮಾನ್ಯತೆ ದೊರಕುವಂತೆ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಇದೇ ವೇಳೆ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನಲ್ಲಿ ತುಳು ಭಾಷೆ, ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಯ ಅಧ್ಯಯನ ಮತ್ತು ಪ್ರಚಾರಕ್ಕಾಗಿ ಸುಸಜ್ಜಿತ ತುಳು ಭವನ ನಿರ್ಮಾಣ ಮಾಡುವಂತೆ ಮನವಿ ಸಲ್ಲಿಸಲಾಗಿದೆ. ಪ್ರಸ್ತಾವಿತ ತುಳು ಭವನದಲ್ಲಿ ಗ್ರಂಥಾಲಯ, ಸಂಶೋಧನಾ ಕೇಂದ್ರ, ಸಭಾಂಗಣ, ವಸ್ತುಸಂಗ್ರಹಾಲಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವ ಯೋಜನೆ ಹೊಂದಲಾಗಿದೆ.

ಕಾರ್ಕಳವು ತುಳುನಾಡಿನ ಪ್ರಮುಖ ಸಾಂಸ್ಕೃತಿಕ ಕೇಂದ್ರಗಳಲ್ಲಿ ಒಂದಾಗಿದ್ದು, ಇಲ್ಲಿ ತುಳು ಭಾಷೆ, ಯಕ್ಷಗಾನ, ಭೂತಾರಾಧನೆ, ನಾಗಾರಾಧನೆ ಸೇರಿದಂತೆ ವಿವಿಧ ಜನಪದ ಕಲೆಗಳು ಇಂದಿಗೂ ಜೀವಂತವಾಗಿವೆ. ಆದ್ದರಿಂದ ಕಾರ್ಕಳದಲ್ಲಿ ತುಳು ಭವನ ನಿರ್ಮಾಣಕ್ಕೆ ಸರ್ಕಾರ ಸೂಕ್ತ ಜಾಗ ಗುರುತಿಸಿ ಅಗತ್ಯ ಅನುದಾನ ಮಂಜೂರು ಮಾಡಿ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಉದಯ್ ಶೆಟ್ಟಿ ಮುನಿಯಾಲ್ ಮನವಿ ಮಾಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!