ವಾಷಿಂಗ್ಟನ್, ಜೂ. 15: ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಗೆ ಅಂತ್ಯ ಹಾಡುವ ನಿಟ್ಟಿನಲ್ಲಿ ಮಹತ್ವದ ಶಾಂತಿ ಒಪ್ಪಂದವೊಂದು ಅಂತಿಮಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಸಂಬಂಧ ಜೂನ್ 19ರಂದು ಸ್ವಿಟ್ಜರ್ಲೆಂಡ್‌ನಲ್ಲಿ ಔಪಚಾರಿಕವಾಗಿ ಒಪ್ಪಂದಕ್ಕೆ ಸಹಿ ಹಾಕಲು ಉಭಯ ರಾಷ್ಟ್ರಗಳು ನಿರ್ಧರಿಸಿವೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ‘ಟ್ರೂತ್ ಸೋಶಿಯಲ್’ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, “ಇರಾನ್ ಇಸ್ಲಾಮಿಕ್ ಗಣರಾಜ್ಯದೊಂದಿಗಿನ ಒಪ್ಪಂದ ಈಗ ಪೂರ್ಣಗೊಂಡಿದೆ. ಎಲ್ಲರಿಗೂ ಅಭಿನಂದನೆಗಳು” ಎಂದು ಹೇಳಿದ್ದಾರೆ.
ಒಪ್ಪಂದ ಜಾರಿಯಾದ ಬಳಿಕ ಜಾಗತಿಕ ವ್ಯಾಪಾರಕ್ಕೆ ಅತ್ಯಂತ ಮಹತ್ವದ ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯುವ ನಿರೀಕ್ಷೆಯಿದ್ದು, ಇರಾನ್ ಬಂದರುಗಳ ಮೇಲಿನ ಅಮೆರಿಕದ ನೌಕಾ ದಿಗ್ಬಂಧನವೂ ಅಂತ್ಯಗೊಳ್ಳಲಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
ಆರಂಭಿಕ ಪೋಸ್ಟ್‌ನಲ್ಲಿ ಜಲಮಾರ್ಗವನ್ನು ತಕ್ಷಣ ತೆರೆಯಲು ಹಾಗೂ ನೌಕಾ ದಿಗ್ಬಂಧನವನ್ನು ಕೂಡಲೇ ತೆಗೆದುಹಾಕಲು ಸೂಚನೆ ನೀಡಿರುವುದಾಗಿ ಅವರು ಹೇಳಿದ್ದರು. ಬಳಿಕ ಮತ್ತೊಂದು ಪೋಸ್ಟ್‌ನಲ್ಲಿ, ಒಪ್ಪಂದಕ್ಕೆ ಅಧಿಕೃತ ಸಹಿ ಬಿದ್ದ ನಂತರವೇ ಹಾರ್ಮುಜ್ ಜಲಸಂಧಿಯನ್ನು ಪುನರಾರಂಭಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
“ಹಾರ್ಮುಜ್ ಜಲಸಂಧಿಯನ್ನು ಯಾವುದೇ ಟೋಲ್ ಇಲ್ಲದೆ ತೆರೆಯಲು ಅಧಿಕಾರ ನೀಡುತ್ತೇನೆ. ಜೊತೆಗೆ ಅಮೆರಿಕದ ನೌಕಾ ದಿಗ್ಬಂಧನವನ್ನು ಕೂಡ ತಕ್ಷಣ ತೆರವುಗೊಳಿಸಲಾಗುವುದು. ಜಾಗತಿಕ ಹಡಗು ಸಂಚಾರ ಮತ್ತೆ ಆರಂಭವಾಗಲಿ, ತೈಲ ಪೂರೈಕೆ ಸರಾಗವಾಗಲಿ” ಎಂದು ಟ್ರಂಪ್ ಬರೆದುಕೊಂಡಿದ್ದಾರೆ.
ಟ್ರಂಪ್ ಅವರ 80ನೇ ಜನ್ಮದಿನದಂದು ಈ ಘೋಷಣೆ ಹೊರಬಿದ್ದಿದ್ದು, ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವಿನ ತೀವ್ರ ರಾಜತಾಂತ್ರಿಕ ಮಾತುಕತೆಗಳ ಬಳಿಕ ಈ ಬೆಳವಣಿಗೆ ಸಂಭವಿಸಿದೆ. ಈ ಒಪ್ಪಂದವು ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಹೆಚ್ಚಿಸುವ ಮಹತ್ವದ ಹೆಜ್ಜೆಯಾಗಲಿದೆ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.
ಆದಾಗ್ಯೂ, ಒಪ್ಪಂದದ ಸಂಪೂರ್ಣ ವಿವರಗಳು ಹಾಗೂ ಅದರ ಅನುಷ್ಠಾನದ ಕುರಿತು ಅಮೆರಿಕ ಮತ್ತು ಇರಾನ್ ಸರ್ಕಾರಗಳಿಂದ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ