
ಲಿಸ್ಬನ್: ಫುಟ್‌ಬಾಲ್ ಜಗತ್ತಿನ ದಿಗ್ಗಜ ಆಟಗಾರ, ಪೋರ್ಚುಗಲ್ ತಂಡದ ಮಾಜಿ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ 23 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ಕ್ರೀಡಾ ಜೀವನಕ್ಕೆ ತೆರೆ ಎಳೆದಿದ್ದಾರೆ.

41 ವರ್ಷದ ರೊನಾಲ್ಡೊ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ತಮ್ಮ ನಿರ್ಧಾರ ಪ್ರಕಟಿಸಿದ್ದು, ಪೋರ್ಚುಗಲ್ ತಂಡದ 7ನೇ ಸಂಖ್ಯೆಯ ಜೆರ್ಸಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಸಮಯ ಬಂದಿದೆ ಎಂದು ಭಾವುಕ ಸಂದೇಶ ನೀಡಿದ್ದಾರೆ.

2003ರಲ್ಲಿ ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ಪದಾರ್ಪಣೆ ಮಾಡಿದ್ದ ಅವರು, ಪೋರ್ಚುಗಲ್ ಪರ 234 ಪಂದ್ಯಗಳನ್ನಾಡಿ 146 ಗೋಲುಗಳನ್ನು ಗಳಿಸಿದ್ದಾರೆ. 2016ರಲ್ಲಿ ಯುರೋ ಕಪ್ ಹಾಗೂ 2019 ಮತ್ತು 2025ರಲ್ಲಿ ಯುಇಎಫ್‌ಎ ನೇಷನ್ಸ್ ಲೀಗ್ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆರು ವಿಶ್ವಕಪ್ ಟೂರ್ನಿಗಳಲ್ಲೂ ಆಡಿದ ಹೆಗ್ಗಳಿಕೆ ಅವರದ್ದಾಗಿದೆ.

ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ವಿದಾಯ ಹೇಳಿದರೂ ಕ್ಲಬ್ ಫುಟ್‌ಬಾಲ್‌ನಿಂದ ನಿವೃತ್ತಿಯಾಗಿಲ್ಲ. ಸದ್ಯ ಸೌದಿ ಅರೇಬಿಯಾದ ಅಲ್ ನಸ್ರ್ ತಂಡದ ಪರ ಆಟ ಮುಂದುವರಿಸಿದ್ದಾರೆ.

