ಟಿಎಂಸಿ ಸಂಸದರ ಬಿಜೆಪಿ ಗುಂಪಿನ ಸೇರ್ಪಡೆ ಜನಾದೇಶಕ್ಕೆ ದ್ರೋಹ: ಅಬ್ದುಲ್ ಮಜೀದ್

ಬಿಸಿ ರೋಡ್, ಜೂನ್ 16: ಟಿಎಂಸಿಯ 20 ಲೋಕಸಭಾ ಸದಸ್ಯರು ಮತದಾರರು ನೀಡಿದ ಜನಾದೇಶಕ್ಕೆ ವಿರುದ್ಧವಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಪಾಳಯವನ್ನು ಸೇರಿರುವುದು ಜನತಂತ್ರದ ಮೌಲ್ಯಗಳಿಗೆ ವಿರುದ್ಧವಾದ ನಡೆ ಹಾಗೂ ಮತದಾರರ ವಿಶ್ವಾಸಕ್ಕೆ ಮಾಡಿದ ದ್ರೋಹವಾಗಿದೆ ಎಂದು ಎಸ್‌ಡಿಪಿಐ ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿದ್ದಾರೆ. ಅವರು ಮಂಗಳೂರಿನಲ್ಲಿ ನಡೆದ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಪ್ರತಿನಿಧಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ದೇಶದ ಪ್ರಸ್ತುತ ರಾಜಕೀಯ ಬೆಳವಣಿಗೆಗಳು, ಪ್ರಜಾಪ್ರಭುತ್ವದ ಸವಾಲುಗಳು ಹಾಗೂ ಕರ್ನಾಟಕದ ರಾಜಕೀಯ ಪರಿಸ್ಥಿತಿಗಳ ಕುರಿತು ಅವರು ಬೆಳಕು ಚೆಲ್ಲಿದರು. ಜನರು ಒಂದು ಪಕ್ಷದ ಸಿದ್ಧಾಂತ, ನೀತಿ ಹಾಗೂ ರಾಜಕೀಯ ನಿಲುವುಗಳನ್ನು ಆಧರಿಸಿ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಆದ್ದರಿಂದ ಚುನಾವಣೆಯಲ್ಲಿ ಪಡೆದ ಜನಾದೇಶವನ್ನು ಕಡೆಗಣಿಸಿ ಬೇರೆ ರಾಜಕೀಯ ಪಾಳಯವನ್ನು ಸೇರುವುದು ನೈತಿಕವಾಗಿ ಹಾಗೂ ರಾಜಕೀಯವಾಗಿ ಸಮರ್ಥನೀಯವಲ್ಲ. ಅಂತಹ ಜನಪ್ರತಿನಿಧಿಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಹೊಸ ರಾಜಕೀಯ ನಿಲುವಿನೊಂದಿಗೆ ಮತ್ತೆ ಜನರ ಮುಂದೆ ಹೋಗಬೇಕು ಎಂದು ಅವರು ಆಗ್ರಹಿಸಿದರು.

ಮತದಾರರ ಪಟ್ಟಿಗೆ ಸಂಬಂಧಿಸಿದ SIR ಪ್ರಕ್ರಿಯೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪಕ್ಷದ ನಾಯಕರು ಹೆಚ್ಚು ಗಮನಹರಿಸಬೇಕು, ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಕಾರ್ಯಕರ್ತರು ಮಾಹಿತಿ ಮತ್ತು ಸಹಕಾರ ನೀಡಬೇಕು ಎಂದು ಕರೆ ನೀಡಿದರು. ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ಉಲ್ಲೇಖಿಸಿದ ಅವರು, ಜನರ ಸಮಸ್ಯೆಗಳಿಗೆ ಸ್ಪಂದಿಸಿ ನ್ಯಾಯದ ಪರವಾಗಿ ನಿಲ್ಲುವ ಮೂಲಕ ಎಸ್‌ಡಿಪಿಐ ಹೆಚ್ಚಿನ ಜನಬೆಂಬಲ ಗಳಿಸಬೇಕು. ಜನರ ಸಮಸ್ಯೆಗಳಿಗೆ ಮಧ್ಯಪ್ರವೇಶಿಸಿ ನ್ಯಾಯದ ವಕ್ತಾರರಾಗಬೇಕು ಎಂದು ಕರೆ ನೀಡಿದರು. ಜೊತೆಗೆ ಪುತ್ತೂರನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಿಸುವುದು ಹಾಗೂ ಬ್ರಹ್ಮರಕೊಟ್ಲು ಟೋಲ್‌ಗೇಟ್‌ ವಿರುದ್ಧದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಅಗತ್ಯವಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸೋ ಫ್ರಾಂಕೋ, ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ, ಎಸ್ ಡಿಪಿಐ ರಾಜ್ಯ ಸಮಿತಿ ಸದಸ್ಯರಾದ ಅಡ್ವಕೇಟ್ ಅಶ್ರಫ್ ಅಗ್ನಾಡಿ, ಅಡ್ವಕೇಟ್ ಅಬ್ದುಲ್ ಮಜೀದ್ ಖಾನ್ ಭಾಗವಹಿಸಿ ಮಾತನಾಡಿದರು.

ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿಗಳಾದ ಸಿದ್ದೀಕ್ ಪುತ್ತೂರು, ಶಾಕಿರ್ ಅಳಕೆಮಜಲು, ನವಾಝ್ ಷರೀಫ್ ಕಟ್ಟೆ ಹಾಗೂ ಅಶ್ರಫ್ ತಲಪಾಡಿ ಅವರು ಪಕ್ಷದ ಕಳೆದ ಒಂದೂವರೆ ವರ್ಷದ ವಾರ್ಷಿಕ ವರದಿಯನ್ನು ಮಂಡಿಸಿದರು. ಪಕ್ಷ ಸಂಘಟನಾ ಚಟುವಟಿಕೆಗಳು, ಜನಪರ ಹೋರಾಟಗಳು ಹಾಗೂ ಸದಸ್ಯತ್ವ ವಿಸ್ತರಣೆ ಕುರಿತ ಚರ್ಚೆ ನಡೆಸಲಾಯಿತು.

ಸಭೆಯ ತೀರ್ಮಾನದಂತೆ ಅಬ್ದುಲ್ ರಹಿಮಾನ್ ನಾವೂರು ಹಾಗೂ ಅಕ್ಬರ್ ಅಲಿ ಪೊನ್ನೋಡಿ ಅವರನ್ನು ಜಿಲ್ಲಾ ಸಮಿತಿಯ ಚುನಾಯಿತ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಹನ್ನೊಂದು ಪ್ರಮುಖ ನಿರ್ಣಯಗಳನ್ನು ಮಂಡಿಸಿ ಅನುಮೋದಿಸಲಾಯಿತು.

ಜಿಲ್ಲಾ ಉಪಾಧ್ಯಕ್ಷ ಇನಾಸ್ ರೋಡ್ರಿಗಸ್ ಸ್ವಾಗತಿಸಿದರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಪುತ್ತೂರು ಧನ್ಯವಾದಗೈದರು. ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಪದಾಧಿಕಾರಿಗಳು ಹಾಗೂ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!