ಎಸ್.ಡಿ.ಪಿ.ಐ ಮಂಗಳೂರು ನಗರ ಜಿಲ್ಲಾ ಪ್ರತಿನಿಧಿ ಸಭೆ : ನೂತನ ಜಿಲ್ಲಾಧ್ಯಕ್ಷರಾಗಿ ಅಶ್ರಫ್ ಅಡ್ಡೂರು ಆಯ್ಕೆ

ಮಂಗಳೂರು, ಜೂನ್ 17: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮಂಗಳೂರು ನಗರ ಜಿಲ್ಲಾ ಪ್ರತಿನಿಧಿ ಸಭೆಯು ಮಂಗಳೂರಿನ ಬಾಂಬೆಲಕ್ಕಿ ಹೋಟೆಲ್ ಸಭಾಂಗಣದಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯಾಧ್ಯಕ್ಷರು ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿ, ಸಾಮಾಜಿಕ ನ್ಯಾಯ, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಹಕ್ಕುಗಳ ರಕ್ಷಣೆ ಮತ್ತು ಪಕ್ಷದ ಸಂಘಟನೆ ಬಲವರ್ಧನೆಯ ಕುರಿತು ಅವರು ಮಾರ್ಗದರ್ಶನ ನೀಡಿದರು.
ಪಕ್ಷದ ಸಿದ್ಧಾಂತಗಳನ್ನು ಜನಸಾಮಾನ್ಯರ ಮನೆಮನೆಗೆ ತಲುಪಿಸುವಲ್ಲಿ ಕಾರ್ಯಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದ ಅವರು, ಮುಂಬರುವ ದಿನಗಳಲ್ಲಿ ಪಕ್ಷದ ಚಟುವಟಿಕೆಗಳನ್ನು ಇನ್ನಷ್ಟು ಬಲಪಡಿಸಲು ಎಲ್ಲರೂ ಸಂಘಟಿತವಾಗಿ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು.

ಸಭೆಯಲ್ಲಿ ಜಿಲ್ಲೆಯ ಮಧ್ಯಂತರ ವರದಿಯನ್ನು ಮಂಡಿಸಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಜಿಲ್ಲಾ ಉಪಾಧ್ಯಕ್ಷೆ ಆಯಿಷಾ ಬಜ್ಪೆ ಹಾಗೂ ಜಿಲ್ಲಾ ಕಾರ್ಯದರ್ಶಿಗಳಾದ ನಿಸಾರ್ ಮರವೂರು ಮತ್ತು ಸುಹೈಲ್ ಖಾನ್ ಅವರು ವರದಿಯನ್ನು ಮಂಡಿಸಿದರು.

ನಾಯಕತ್ವ ತರಗತಿಯನ್ನು ಎಸ್.ಡಿ.ಪಿ.ಐ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಅಥಾವುಲ್ಲಾ ಜೋಕಟ್ಟೆ ನಡೆಸಿಕೊಟ್ಟರು. ಸಮಾರೋಪ ಭಾಷಣವನ್ನು ಎಸ್.ಡಿ.ಪಿ.ಐ ರಾಜ್ಯ ಸಮಿತಿ ಸದಸ್ಯೆ ಮಿಸ್ರಿಯಾ ಕಣ್ಣೂರು ಅವರು ಮಾಡಿದರು.

ಈ ಸಂದರ್ಭದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಮಂಗಳೂರು ನಗರ ಜಿಲ್ಲಾ ಘಟಕದ ನೂತನ ಜಿಲ್ಲಾಧ್ಯಕ್ಷರಾಗಿ ಅಶ್ರಫ್ ಅಡ್ಡೂರು ಅವರನ್ನು ಘೋಷಿಸಲಾಯಿತು. ಅಲ್ಲದೆ, ಜಿಲ್ಲಾ ಸಮಿತಿಗೆ ನೂತನ ಸದಸ್ಯರಾಗಿ ಇಸ್ಮಾಯಿಲ್ ಇಂಜಿನಿಯರ್, ಅಶ್ರಫ್ ಮಂಚಿ, ಅಝೀಝ್ ಸುರತ್ಕಲ್ ಹಾಗೂ ಶಫೀಕ್ ಮಲ್ಲೂರು ಅವರನ್ನು ಘೋಷಿಸಲಾಯಿತು.

ಜಿಲ್ಲಾ ಪ್ರತಿನಿಧಿ ಸಮಾವೇಶದಲ್ಲಿ ವಿವಿಧ ಸಂಘಟನಾ ಹಾಗೂ ಜನಪರ ನಿರ್ಣಯಗಳನ್ನು ಅಂಗೀಕರಿಸಲಾಯಿತು.
ಸಭೆಯಲ್ಲಿ ಮಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಎಲ್ಲಾ ಪದಾಧಿಕಾರಿಗಳು, ಸಮಿತಿ ಸದಸ್ಯರು ಹಾಗೂ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಸ್ವಾಗತಿಸಿದರು ಹಾಗೂ ಜಿಲ್ಲಾ ಕಾರ್ಯದರ್ಶಿ ನಿಸಾರ್ ಮರವೂರು ಧನ್ಯವಾದಗೈದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!