ಮಾಡ ಅಂಗನವಾಡಿ ಸುತ್ತುಗೋಡೆ ವಿವಾದ ತಾರಕಕ್ಕೆ! ಹೈಕೋರ್ಟ್ ಆದೇಶವಿದ್ದರೂ ಕಾಮಗಾರಿಗೆ ಮುಂದಾದ ಪಂಚಾಯತ್? ಹಿಂದೂ ರುದ್ರಭೂಮಿ ಸಮಿತಿಯಿಂದ ತಡೆ

ಮಾಡ: ಮಾಡ ಸಾರ್ವಜನಿಕ ಹಿಂದೂ ರುದ್ರಭೂಮಿಗೆ ಸಂಬಂಧಿಸಿದ ಅಂಗನವಾಡಿ ಸುತ್ತುಗೋಡೆ ವಿವಾದ ಇದೀಗ ಮತ್ತಷ್ಟು ತಾರಕಕ್ಕೇರಿದೆ. 2.70 ಎಕರೆ ವಿಸ್ತೀರ್ಣದ ಸಾರ್ವಜನಿಕ ಹಿಂದೂ ರುದ್ರಭೂಮಿಯ ಒತ್ತುವರಿ ತೆರವುಗೊಳಿಸಿ, ಆವರಣ ಗೋಡೆ ನಿರ್ಮಿಸುವಂತೆ ಕೇರಳ ಹೈಕೋರ್ಟ್ ಆದೇಶ ನೀಡಿದ್ದರೂ, ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸದೆ ಪಂಚಾಯತ್ ಕಾಮಗಾರಿಗೆ ಮುಂದಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಇಂದು ಅಂಗನವಾಡಿಯ ಸುತ್ತುಗೋಡೆ ನಿರ್ಮಾಣ ಕಾಮಗಾರಿಗೆ ಪೊಲೀಸ್ ಭದ್ರತೆಯೊಂದಿಗೆ ಸಿದ್ಧತೆ ನಡೆಸಲಾಗಿತ್ತು. ಈ ಸಂಬಂಧ ಪಂಚಾಯತ್ ಸಮಿತಿಯು ಪೊಲೀಸ್ ಠಾಣೆಗೆ ಲಿಖಿತವಾಗಿ ನೀಡಿದ್ದ ದಾಖಲೆಯ ಆಧಾರದ ಮೇಲೆ ಕಾಮಗಾರಿ ಆರಂಭಿಸಲು ಮುಂದಾಗಿದ್ದರು ಎನ್ನಲಾಗಿದೆ.

ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಸಾರ್ವಜನಿಕ ಹಿಂದೂ ರುದ್ರಭೂಮಿ ಸಮಿತಿ (ರಿ.) ಉದ್ಯಾವರ ಮಾಡ ಇದರ ಸದಸ್ಯರು ಸ್ಥಳಕ್ಕೆ ಧಾವಿಸಿದರು. ಈ ಸಂದರ್ಭದಲ್ಲಿ ರುದ್ರಭೂಮಿಗೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ನೀಡಿರುವ ಆದೇಶದ ಪ್ರತಿಯನ್ನು ಪೊಲೀಸರಿಗೆ ಸಲ್ಲಿಸಿ, ನ್ಯಾಯಾಲಯದ ನಿರ್ದೇಶನಗಳಿರುವಾಗ ಕಾಮಗಾರಿ ನಡೆಸುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಸಮಿತಿಯ ಮನವಿಯ ಹಿನ್ನೆಲೆಯಲ್ಲಿ ಪೊಲೀಸರು ಕಾಮಗಾರಿಯನ್ನು ತಡೆಹಿಡಿದಿದ್ದಾರೆ.

ಈ ಸಂದರ್ಭ ಕೆಲವು ಹೊತ್ತು ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದ್ದು ಪೊಲೀಸರ ಮಧ್ಯಸ್ಥಿಕೆಯಿಂದ ಶಾಂತವಾಗಿದೆ.

ಇದೀಗ ಪಂಚಾಯತ್ ಸದಸ್ಯರ ನೇತೃತ್ವದಲ್ಲಿ ಅಂಗನವಾಡಿ ಸುತ್ತಮುತ್ತಲಿನವರು ಅಂಗನವಾಡಿ ಸುರಕ್ಷತೆಗೆ ನ್ಯಾಯ ಒದಗಿಸುವಂತೆ ನ್ಯಾಯಕ್ಕಾಗಿ ಧರಣಿ ನಡೆಸುತಿದ್ದಾರೆ .

ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ಮೃತದೇಹಗಳ ಅಂತ್ಯಸಂಸ್ಕಾರ ಹಾಗೂ ದಹನ ಕಾರ್ಯಗಳನ್ನು ನಡೆಸುವ ಸಂದರ್ಭದಲ್ಲಿ ಸ್ಥಳೀಯರಿಂದ ನಿರಂತರ ಅಡ್ಡಿ, ಆತಂಕ ಮತ್ತು ಕಿರುಕುಳ ಎದುರಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿಂದೂ ರುದ್ರಭೂಮಿ ಸಮಿತಿ ಕೇರಳ ಹೈಕೋರ್ಟ್‌ನ ಮೊರೆ ಹೋಗಿತ್ತು.


ಈ ಸಂಬಂಧ WP(C) No. 22626/2022ರ ಅಡಿಯಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಸಮಿತಿ ಸಲ್ಲಿಸಿದ ದಾಖಲೆಗಳು ಹಾಗೂ ಸಾಕ್ಷ್ಯಾಧಾರಗಳನ್ನು ಪರಿಗಣಿಸಿದ ನ್ಯಾಯಾಲಯವು, 2.70 ಎಕರೆ ವಿಸ್ತೀರ್ಣದ ರುದ್ರಭೂಮಿ ಜಾಗದಲ್ಲಿರುವ ಒತ್ತುವರಿಗಳನ್ನು ತೆರವುಗೊಳಿಸಿ, ಆಸ್ತಿಯ ರಕ್ಷಣೆಗೆ ಸೂಕ್ತ ಆವರಣ ಗೋಡೆ ನಿರ್ಮಿಸುವಂತೆ ಸಂಬಂಧಪಟ್ಟ ಪಂಚಾಯತ್‌ಗೆ ನಿರ್ದೇಶನ ನೀಡಿತ್ತು. ಈ ಆದೇಶವನ್ನು 2025ರ ಆಗಸ್ಟ್ 25ರಂದು ಪಂಚಾಯತ್‌ಗೆ ನೀಡಲಾಗಿದೆ ಎಂದು ಸಮಿತಿ ತಿಳಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!