ಮಂಗಳೂರು, ಕಲ್ಕೂರ ಪ್ರತಿಷ್ಠಾನ ಹಾಗೂ ಸಾವಯವ ಕೃಷಿಕ ಗ್ರಾಹಕ ಬಳಗದ ಸಹಯೋಗದಲ್ಲಿ ಸಾವಯವ ಕೃಷಿಕರು ಬೆಳೆಸಿದ ವಿವಿಧ ತಳಿಯ ಮಾವು ಮತ್ತು ಹಲಸಿನ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳವು ಜೂನ್ 20 ಮತ್ತು 21ರಂದು ಕದ್ರಿ ಕಂಬಳದ ಮಲ್ಲಿಕಾ ಬಡಾವಣೆಯಲ್ಲಿರುವ ‘ಮಂಜು ಪ್ರಾಸಾದ’ ಆವರಣದಲ್ಲಿ ನಡೆಯಲಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡು-ನುಡಿ ಜಾಗೃತಿ ಸಮ್ಮೇಳನ ಸರಣಿಯ ಅಂಗವಾಗಿ ಆಯೋಜಿಸಿರುವ ಈ ಮೇಳದಲ್ಲಿ ಬೆಳೆಗಾರರು ಮತ್ತು ಗ್ರಾಹಕರಿಗೆ ನೇರ ಸಂಪರ್ಕದ ಅವಕಾಶ ಕಲ್ಪಿಸಲಾಗಿದೆ ಎಂದರು.
ಜೂನ್ 20ರಂದು ಬೆಳಗ್ಗೆ 10 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಜಿತಕಾಮಾನಂದ ಸ್ವಾಮೀಜಿ ದಿವ್ಯ ಉಪಸ್ಥಿತಿ ವಹಿಸಲಿದ್ದು, ಶರವು ರಾಘವೇಂದ್ರ ಶಾಸ್ತ್ರಿ ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ. ಡಾ. ಎಂ.ಬಿ. ಪುರಾಣಿಕ್ ಅಧ್ಯಕ್ಷತೆ ವಹಿಸಲಿದ್ದು, ಖ್ಯಾತ ವೈದ್ಯ ಡಾ. ಜೀವರಾಜ ಸೊರಕೆ ಮೇಳ ಉದ್ಘಾಟಿಸಲಿದ್ದಾರೆ. ಶಾಸಕ ಡಿ. ವೇದವ್ಯಾಸ ಕಾಮತ್ ಮಾರಾಟ ಮಳಿಗೆಗಳಿಗೆ ಚಾಲನೆ ನೀಡಲಿದ್ದಾರೆ.
ಎರಡನೇ ದಿನ ‘ಯೋಗ, ಸಾವಯವ ಆಹಾರ – ಆರೋಗ್ಯ ಭಾಗ್ಯ’ ವಿಷಯದಡಿ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಜಾಗೃತಿ ಸಂದೇಶ ನೀಡಲಿದ್ದು, ಪಡುಬಿದ್ರೆಯ ಆಯುರ್ವೇದ ವೈದ್ಯ ಹಾಗೂ ಪಾರಂಪರಿಕ ನಾಟಿ ತಜ್ಞ ಡಾ. ಎನ್.ಟಿ. ಅಂಚನ್ ಅವರು ಹಲಸು ಮತ್ತು ಮಾವಿನ ಆಹಾರಗಳ ವೈಜ್ಞಾನಿಕ ಮಹತ್ವದ ಕುರಿತು ಉಪನ್ಯಾಸ ನೀಡಲಿದ್ದಾರೆ.
ಮೇಳದಲ್ಲಿ ರಾಮನಗರ, ಮಂಡ್ಯ, ಮೈಸೂರು, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳ ಕೃಷಿಕರು ಭಾಗವಹಿಸಲಿದ್ದು, ರುದ್ರಾಕ್ಷ, ಚಂದ್ರಬರ್ಕೆ ಸೇರಿದಂತೆ ಹಲವು ತಳಿಯ ಹಲಸುಗಳು ಹಾಗೂ ಮಲ್ಲಿಕಾ, ಮಲ್ಲೋವ, ನೀಲಂ, ಕಾಳಪಾಡಿ, ಬಾದಾಮಿ, ತೋತಾಪುರಿ ಸೇರಿದಂತೆ ವಿವಿಧ ತಳಿಯ ಮಾವಿನ ಹಣ್ಣುಗಳು ಲಭ್ಯವಿರಲಿವೆ.
ಇದಲ್ಲದೆ ಹಲಸಿನ ಕಬಾಬ್, ಗಾರಿಗೆ, ಚಿಪ್ಸ್, ಉಂಡ್ಯಕ್ಕ, ಪಾವುಭಾಜಿ, ಕಡುಬು, ಕೇಕ್, ಹೋಳಿಗೆ, ಹಪ್ಪಳ, ಉಪ್ಪಿನಕಾಯಿ, ಐಸ್‌ಕ್ರೀಂ ಸೇರಿದಂತೆ ಮಾವು-ಹಲಸಿನಿಂದ ತಯಾರಿಸಿದ ಮೌಲ್ಯವರ್ಧಿತ ಆಹಾರ ಪದಾರ್ಥಗಳು, ತಾವರೆ ಹೂವುಗಳು, ಜಲಸಸ್ಯಗಳು, ಹಣ್ಣಿನ ಗಿಡಗಳು, ದೇಶೀ ತರಕಾರಿ ಬೀಜಗಳು, ಸಸಿಗಳು, ಕೃಷಿ ಉಪಕರಣಗಳು ಹಾಗೂ ಕೃಷಿ ಸಾಹಿತ್ಯ ಕೃತಿಗಳ ಪ್ರದರ್ಶನ ಮತ್ತು ಮಾರಾಟವೂ ನಡೆಯಲಿದೆ.
ಎರಡು ದಿನಗಳ ಕಾಲ ಬೆಳಿಗ್ಗೆ 8ರಿಂದ ಸಂಜೆ 7ರವರೆಗೆ ವಾಧಿರಾಜ ಮಂಟಪದ ಪೇಜಾವರ ವಿಶ್ವೇಶತೀರ್ಥ ವೇದಿಕೆಯಲ್ಲಿ ಗಮಕ, ಸಂಗೀತ, ಯಕ್ಷಗಾನ ಸಂಗೀತ, ಹರಿಕಥೆ, ಭಜನೆ, ತಾಳಮದ್ದಳೆ, ಗಾನ ಸಂಭ್ರಮ, ಮಿಮಿಕ್ರಿ, ವಾದ್ಯ ಸಂಗೀತ ಹಾಗೂ ಪರಿಸರ ಗೀತೆಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ವಿದ್ಯಾರ್ಥಿ ಪ್ರತಿಭೆಗಳಿಗೆ ವಿಶೇಷ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವೂ ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಸುಧಾಕರ್ ರಾವ್ ಪೇಜಾವರ, ಶಿವಪ್ರಸಾದ್ , ಪ್ರಭು, ಜನಾರ್ದನ ಹಾಗೂ ದಯಾನಂದ ಕಟೀಲು ಉಪಸ್ಥಿತರಿದ್ದರು.