ಎತ್ತಿನಹೊಳೆ ಯೋಜನೆ ಕುರಿತು ಕರಾವಳಿ ಭಾಗದ ಆತಂಕಗಳಿಗೆ ಸರ್ಕಾರ ಸ್ಪಷ್ಟನೆ ನೀಡಲಿ: ಎಎಪಿ ಆಗ್ರಹ

ಮಂಗಳೂರು, ಜೂ.17: ಎತ್ತಿನಹೊಳೆ (ನೇತ್ರಾವತಿ ನದಿ ತಿರುವು) ಯೋಜನೆಯಿಂದ ಕರಾವಳಿ ಭಾಗದ ಪರಿಸರ, ಜೀವವೈವಿಧ್ಯ ಹಾಗೂ ಕುಡಿಯುವ ನೀರಿನ ಭದ್ರತೆಗೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್ ಆಗ್ರಹಿಸಿದರು.

ನಗರದ ಪತ್ರಿಕಾಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ ನೀರಿನ ಕೊರತೆ ಮತ್ತು ಫ್ಲೋರೈಡ್ ಸಮಸ್ಯೆ ನಿವಾರಣೆಗೆ 2012ರಲ್ಲಿ ಆರಂಭಗೊಂಡ ಯೋಜನೆಯ ವೆಚ್ಚ ಆರಂಭಿಕ ₹9,000 ಕೋಟಿಯಿಂದ ₹23,000 ಕೋಟಿವರೆಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ಸರ್ಕಾರದ ಪ್ರಕಾರ ಯೋಜನೆಯಿಂದ ಏಳು ಜಿಲ್ಲೆಗಳಿಗೆ ವಾರ್ಷಿಕ 24.01 ಟಿಎಂಸಿ ನೀರು ಪೂರೈಕೆಯಾಗಲಿದೆ. ಆದರೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಅಧ್ಯಯನದಲ್ಲಿ ಲಭ್ಯವಿರುವ ನೀರಿನ ಪ್ರಮಾಣ ಕೇವಲ 9.55 ಟಿಎಂಸಿ ಎಂದು ಉಲ್ಲೇಖಿಸಲಾಗಿದೆ. ಈ ವ್ಯತ್ಯಾಸ ಯೋಜನೆಯ ವೈಜ್ಞಾನಿಕತೆ ಕುರಿತು ಅನುಮಾನ ಮೂಡಿಸಿದೆ ಎಂದು ಅವರು ತಿಳಿಸಿದರು.

ಮಂಗಳೂರು ಸೇರಿದಂತೆ ಕರಾವಳಿ ಭಾಗದ ಜನರು ಕುಡಿಯುವ ನೀರಿಗಾಗಿ ತುಂಬೆ ವೆಂಟೆಡ್ ಡ್ಯಾಂ ಅನ್ನು ಅವಲಂಬಿಸಿದ್ದು, ಮೇಲ್ಭಾಗದಲ್ಲಿ ನೀರನ್ನು ಎತ್ತಿ ಹರಿಸುವುದರಿಂದ ಜಲಾಶಯಕ್ಕೆ ಹರಿದುಬರುವ ನೀರಿನ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ. ಇದರಿಂದ ಬೇಸಿಗೆ ಅವಧಿಯಲ್ಲಿ ನೇತ್ರಾವತಿ ನದಿಯ ಹರಿವು ಕುಂಠಿತಗೊಳ್ಳುವ ಅಪಾಯವಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಯೋಜನೆಯಿಂದ ನದಿಯ ಕೆಳಭಾಗದ ಜನರ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ಸಮಗ್ರ ವೈಜ್ಞಾನಿಕ ಅಧ್ಯಯನ ನಡೆಸಿಲ್ಲ. ಅಲ್ಲದೆ ಕರಾವಳಿ ಭಾಗಕ್ಕೆ ಪರ್ಯಾಯ ನೀರಿನ ಮೂಲಗಳ ಬಗ್ಗೆ ಸರ್ಕಾರ ಯಾವುದೇ ಸ್ಪಷ್ಟ ಭರವಸೆ ನೀಡಿಲ್ಲ ಎಂದು ಅವರು ಆರೋಪಿಸಿದರು.

ಉಡುಪಿ ಜಿಲ್ಲೆಯ ವಾರಾಹಿ ನೀರಾವರಿ ಯೋಜನೆಯೂ ದಶಕಗಳ ಬಳಿಕವೂ ಅಪೂರ್ಣವಾಗಿರುವುದನ್ನು ಉಲ್ಲೇಖಿಸಿದ ಅವರು, ಎತ್ತಿನಹೊಳೆ ಯೋಜನೆಯನ್ನು ಮುಂದುವರಿಸುವ ಮುನ್ನ ಸರ್ಕಾರ ಪಾರದರ್ಶಕ ವೈಜ್ಞಾನಿಕ ಮೌಲ್ಯಮಾಪನ ನಡೆಸಿ, ಕರಾವಳಿ ಭಾಗದ ಜನರ ಆತಂಕಗಳಿಗೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್.ಎಲ್. ಪಿಂಟೊ, ಮಹಿಳಾ ಘಟಕ ಅಧ್ಯಕ್ಷೆ ಸೀಮಾ ಮಡಿವಾಳ, ಜಿಲ್ಲಾ ಕಾರ್ಯದರ್ಶಿಗಳಾದ ವಾಸುದೇವ್, ಕಬೀರ್ ಕಾಟಿಪಳ್ಳ, ಶಾಲೆಟ್ ಪಿಂಟೊ ಹಾಗೂ ಲೆಸ್ಲಿ ಫೆರ್ನಾಂಡಿಸ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!