ಮಂಗಳೂರು: ಜಪ್ಪಿನಮೊಗರು ಕಡೆಕಾರು ಶ್ರೀ ಮಲ್ಲಿಕಾರ್ಜುನ ಕ್ಷೇತ್ರದ ಪುನರ್ನಿರ್ಮಾಣ ಕಾಮಗಾರಿಗೆ ಬುಧವಾರ ಬ್ರಹ್ಮಶ್ರೀ ವೇದಮೂರ್ತಿ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಯವರ ವೈದಿಕ ನೇತೃತ್ವದಲ್ಲಿ ಶಿಲಾನ್ಯಾಸ ನೆರವೇರಿತು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಒಂದು ಕಾಲದಲ್ಲಿ ಹಿಂದುಳಿದ ಪ್ರದೇಶವಾಗಿದ್ದ ಈ ಭಾಗ ಇಂದು ಅಭಿವೃದ್ಧಿ ಹೊಂದಿದ್ದು, ದೇವಸ್ಥಾನದ ಪುನರ್ನಿರ್ಮಾಣ ಕಾರ್ಯಕ್ಕೆ ಅವಕಾಶ ದೊರೆತಿರುವುದು ಭಕ್ತರ ಸೌಭಾಗ್ಯ ಎಂದರು. ದೇವಸ್ಥಾನ ಪುನರ್ನಿರ್ಮಾಣಕ್ಕೆ ಮಾಣಿಲ ಕ್ಷೇತ್ರದಿಂದ ₹1 ಲಕ್ಷ ದೇಣಿಗೆ ನೀಡುವುದಾಗಿ ಹಾಗೂ ಕರಸೇವೆಗೆ ಸ್ವಯಂಸೇವಕರನ್ನು ಕಳುಹಿಸಲು ಸಿದ್ಧವಿರುವುದಾಗಿ ಘೋಷಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಮಾತನಾಡಿ, ಕ್ಷೇತ್ರದ ಪುನರ್ನಿರ್ಮಾಣ ಕಾರ್ಯವನ್ನು 10 ತಿಂಗಳೊಳಗೆ ಪೂರ್ಣಗೊಳಿಸಿ, ಮುಂದಿನ ಏಪ್ರಿಲ್ನಲ್ಲಿ ಬ್ರಹ್ಮಕಲಶೋತ್ಸವ ನಡೆಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಹರಿಪ್ರಸಾದ್ ಜೆ. ಮಾತನಾಡಿ, ನೇತ್ರಾವತಿ ನದಿ ತೀರದಲ್ಲಿರುವ ಸುಮಾರು 680 ವರ್ಷಗಳ ಇತಿಹಾಸ ಹೊಂದಿರುವ ಈ ಕ್ಷೇತ್ರವನ್ನು ಐದು ಅಡಿ ಎತ್ತರಿಸಿ ಪುನರ್ನಿರ್ಮಿಸುವ ಸಂಕಲ್ಪ ಕೈಗೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಕಾರ್ಪೊರೇಟರ್ ವೀಣಾ ಮಂಗಳ, ಆಡಳಿತ ಮೋಕ್ತೆಸರ ಶಿವಾನಂದ ರಾವ್, ಜೆ. ಜಗದೀಶ್ ರಾವ್, ಜೆ. ಕೊರಗಪ್ಪ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಧಾಕೃಷ್ಣ, ಟ್ರಸ್ಟಿಗಳಾದ ನವೀನ್ಚಂದ್ರ, ಸುಧೀರ್, ಕೋಶಾಧಿಕಾರಿ ಸಂತೋಷ್, ಪ್ರದೀಪ್ ಪಾಲೆಮಾರ್ ಹಾಗೂ ಪ್ರಸನ್ನ ಪಾಲೆಮಾರ್ ಉಪಸ್ಥಿತರಿದ್ದರು.
ಯೋಗೀಶ್ ಶೆಟ್ಟಿ ಜೆಪ್ಪು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರದ ಉಪಾಧ್ಯಕ್ಷ ಜೆ.ಕೆ. ರಾವ್ ವಂದಿಸಿದರು.