ಕಡಬ,ಬಿಳಿನೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ (ಸಿಎ ಬ್ಯಾಂಕ್) ವ್ಯವಹಾರಗಳ ಕುರಿತು ಕೆಲವರು ಸುಳ್ಳು ಆರೋಪ ಹಾಗೂ ಅಪಪ್ರಚಾರ ನಡೆಸುತ್ತಿದ್ದು, ಸಂಘದಲ್ಲಿ ಯಾವುದೇ ಭ್ರಷ್ಟಾಚಾರ ಅಥವಾ ಅವ್ಯವಹಾರ ನಡೆದಿಲ್ಲ ಎಂದು ಸಂಘದ ಅಧ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್ ಸ್ಪಷ್ಟಪಡಿಸಿದರು.
ಮಂಗಳವಾರ ಕಡಬದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ಆಡಳಿತ ಮಂಡಳಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಧಾರರಹಿತ ಆರೋಪಗಳನ್ನು ಹರಿಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸತ್ಯ ಬಹಿರಂಗವಾಗಲೆಂದು ಕೋಡಿಂಬಾಳದ ಕಾರಣಿಕ ಕ್ಷೇತ್ರ ಮಜ್ಜಾರು ಶ್ರೀ ರಾಜನ್ ದೈವದ ಸನ್ನಿಧಿಯಲ್ಲಿ ಅರಿಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಕಾತಿ ಪ್ರಕರಣ ಹಲವು ವರ್ಷಗಳಿಂದ ನ್ಯಾಯಾಲಯದ ವ್ಯಾಪ್ತಿಯಲ್ಲಿದ್ದು, ರಂಜಿತ್ ಅವರನ್ನು ನೇಮಕ ಮಾಡುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಆ ಆದೇಶದಂತೆ ಆಡಳಿತ ಮಂಡಳಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿದೆ. ಆದರೆ ಈ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಹೇಳಿದರು.
ಸಂಘದ ನಿರ್ದೇಶಕ ರಮೇಶ್ ವಾಲ್ತಾಜೆ ಮನೆ ದುರಸ್ತಿಗಾಗಿ ಪಡೆದ ₹20 ಲಕ್ಷ ಸಾಲವನ್ನು ನಿರ್ದೇಶಕರಿಗೆ ಹಂಚಲಾಗಿದೆ ಹಾಗೂ ಅದನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಮರುಪಾವತಿಸಲಿದ್ದಾರೆ ಎಂಬ ಆರೋಪಗಳು ಸಂಪೂರ್ಣ ಸುಳ್ಳು ಎಂದು ಅವರು ಸ್ಪಷ್ಟಪಡಿಸಿದರು.
ಬಿಳಿನೆಲೆ ಸಿಎ ಬ್ಯಾಂಕ್ ರೈತರಿಗೆ ಸಾಲ ಸೌಲಭ್ಯ ಮತ್ತು ಕೃಷಿ ಅಭಿವೃದ್ಧಿಗೆ ಪೂರಕವಾದ ಸೇವೆಗಳನ್ನು ನೀಡುತ್ತಿದ್ದು, ಕೆಲವರು ರಾಜಕೀಯ ಅಥವಾ ವೈಯಕ್ತಿಕ ಹಿತಾಸಕ್ತಿಯಿಂದ ಸಂಘದ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ವೆಂಕಟ್ರಮಣ ಗೌಡ ಕೋಲ್ಪೆ, ನಿರ್ದೇಶಕರಾದ ಗಿರಿಯಪ್ಪ ಗೌಡ ಮುಗೇರು, ಸತೀಶ್ ಎರ್ಕ, ರಮೇಶ್ ವಾಲ್ತಾಜೆ, ಸುರೇಶ್ ಬಿಳಿನೆಲೆ ಹಾಗೂ ತನಿಯಪ್ಪ ಬೊಟ್ಟಡ್ಕ ಉಪಸ್ಥಿತರಿದ್ದರು