ಕಲ್ಲಡ್ಕ ಫ್ಲೈಓವರ್ ನಿರ್ಮಾಣ ಪೂರ್ಣ; ಸಮಸ್ಯೆಗಳು ಮಾತ್ರ ಯಥಾಸ್ಥಿತಿ

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75ರ ಬಿಸಿರೋಡು–ಅಡ್ಡಹೊಳೆ ಚತುಷ್ಪಥ ರಸ್ತೆ ಕಾಮಗಾರಿಯ ಭಾಗವಾಗಿ ಕಲ್ಲಡ್ಕದಲ್ಲಿ ನಿರ್ಮಾಣಗೊಂಡಿರುವ 2.1 ಕಿ.ಮೀ ಉದ್ದದ ಫ್ಲೈಓವರ್ ರಾಜ್ಯದ ಗಮನ ಸೆಳೆದಿದ್ದರೂ, ಸ್ಥಳೀಯರ ಸಮಸ್ಯೆಗಳು ಮಾತ್ರ ಇನ್ನೂ ಬಗೆಹರಿದಿಲ್ಲ ಎಂಬ ಆರೋಪ ಕೇಳಿಬಂದಿದೆ.

ಫ್ಲೈಓವರ್ ನಿರ್ಮಾಣದ ಅವಧಿಯಲ್ಲಿ ಧೂಳು, ವಾಹನ ಸಂಚಾರದ ಅಡಚಣೆ ಹಾಗೂ ವ್ಯಾಪಾರ ವಹಿವಾಟಿನ ಕುಸಿತದಿಂದ ಸ್ಥಳೀಯ ವ್ಯಾಪಾರಿಗಳು ಸಂಕಷ್ಟ ಅನುಭವಿಸಿದ್ದರು. ಕಾಮಗಾರಿ ಪೂರ್ಣಗೊಂಡ ಬಳಿಕವೂ ಸರ್ವೀಸ್ ರಸ್ತೆಯ ಅವ್ಯವಸ್ಥೆ, ಪಾರ್ಕಿಂಗ್ ಸಮಸ್ಯೆ ಹಾಗೂ ಸಂಚಾರ ನಿಯಮ ಉಲ್ಲಂಘನೆಗಳು ಮುಂದುವರಿದಿವೆ ಎಂದು ಸಾರ್ವಜನಿಕರು ದೂರಿದ್ದಾರೆ.

ಸರ್ವೀಸ್ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಕೆಲವರು ನಿಯಮ ಮೀರಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸುತ್ತಿದ್ದಾರೆ. ಇದರಿಂದ ಅಪಘಾತ ಸಂಭವಿಸುವ ಭೀತಿ ಎದುರಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇನ್ನೊಂದೆಡೆ, ಫ್ಲೈಓವರ್ ನಿರ್ಮಾಣದ ಬಳಿಕ ಕಲ್ಲಡ್ಕ ಪೇಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದು, ವ್ಯಾಪಾರ ಚಟುವಟಿಕೆಗಳು ಚೇತರಿಕೆ ಕಂಡಿವೆ. ಆದರೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ರಸ್ತೆ ಬದಿಯಲ್ಲೇ ವಾಹನ ನಿಲ್ಲಿಸಲಾಗುತ್ತಿದೆ. ಒಂದು ವೇಳೆ ಪಾರ್ಕಿಂಗ್ ನಿರ್ಬಂಧಿಸಿದರೆ ಸ್ಥಳೀಯ ವ್ಯಾಪಾರಕ್ಕೆ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ವ್ಯಾಪಾರಸ್ಥರು ಅಭಿಪ್ರಾಯಪಟ್ಟಿದ್ದಾರೆ.

ಫ್ಲೈಓವರ್ ಅಡಿಭಾಗದಲ್ಲಿ ಸಾಕಷ್ಟು ಖಾಲಿ ಜಾಗವಿದ್ದು, ಅಲ್ಲಿ ವಾಹನ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ. ಆದರೆ ಸುರಕ್ಷತಾ ಕಾರಣಗಳಿಂದ ಅಂತಹ ಅವಕಾಶ ನೀಡಲು ಸಾಧ್ಯವಿಲ್ಲ ಎಂಬುದು ಹೆದ್ದಾರಿ ಇಲಾಖೆಯ ನಿಲುವಾಗಿದೆ.

ಒಟ್ಟಾರೆ, ಕೋಟ್ಯಂತರ ರೂಪಾಯಿ ವೆಚ್ಚದ ಫ್ಲೈಓವರ್ ನಿರ್ಮಾಣಗೊಂಡಿದ್ದರೂ ಕಲ್ಲಡ್ಕ ಪೇಟೆಯ ಸಂಚಾರ ಮತ್ತು ಪಾರ್ಕಿಂಗ್ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಿಲ್ಲ. ಸಾರ್ವಜನಿಕರ ಈ ಸಮಸ್ಯೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಯಾವಾಗ ಸ್ಪಂದಿಸಲಿದ್ದಾರೆ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಮೂಡಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!