ಅಲೋಶಿಯಸ್ ವಿವಿಗೆ ಪ್ರತಿಷ್ಠಿತ ಯುಜಿಸಿ ಕೆಟಗರಿ-1 ಸ್ಥಾನಮಾನ

ಮಂಗಳೂರು, ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯವು ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಶ್ರೇಣೀಕೃತ ಸ್ವಾಯತ್ತತೆ ನಿಯಮಗಳ ಅಡಿಯಲ್ಲಿ ಪ್ರತಿಷ್ಠಿತ ಕೆಟಗರಿ-1 ಸ್ಥಾನಮಾನವನ್ನು ಪಡೆದು ಐತಿಹಾಸಿಕ ಮೈಲಿಗಲ್ಲು ಸಾಧಿಸಿದೆ.

ನಗರದ ಪತ್ರಿಕಾಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ರೆ. ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ., ವಿಶ್ವವಿದ್ಯಾಲಯದ 146 ವರ್ಷಗಳ ಶೈಕ್ಷಣಿಕ ಶ್ರೇಷ್ಠತೆ, ನಾವೀನ್ಯತೆ, ಸಂಶೋಧನೆ ಮತ್ತು ರಾಷ್ಟ್ರ ನಿರ್ಮಾಣದ ಸೇವೆಯನ್ನು ಪರಿಗಣಿಸಿ ಯುಜಿಸಿ ಈ ಗೌರವವನ್ನು ನೀಡಿದೆ ಎಂದು ಹೇಳಿದರು.

ಕಳೆದ ಒಂದೂವರೆ ವರ್ಷಗಳಿಂದ ಈ ಮಾನ್ಯತೆಗಾಗಿ ಅಗತ್ಯ ಪ್ರಕ್ರಿಯೆಗಳು ನಡೆದಿದ್ದು, ವಿಶ್ವವಿದ್ಯಾಲಯದ ಶೈಕ್ಷಣಿಕ ಸಾಧನೆ, ಸಂಶೋಧನಾ ಕಾರ್ಯಕ್ಷಮತೆ ಹಾಗೂ ಆಡಳಿತಾತ್ಮಕ ಗುಣಮಟ್ಟವನ್ನು ಮೌಲ್ಯಮಾಪನ ಮಾಡಿದ ಬಳಿಕ ಯುಜಿಸಿ ಕೆಟಗರಿ-1 ಸ್ಥಾನಮಾನವನ್ನು ಮಂಜೂರು ಮಾಡಿದೆ ಎಂದು ಅವರು ತಿಳಿಸಿದರು.

ಪ್ರಸ್ತುತ ಭಾರತದಲ್ಲಿ 1,292 ವಿಶ್ವವಿದ್ಯಾಲಯಗಳಿದ್ದು, ಅವುಗಳಲ್ಲಿ ಕೇವಲ 157 ಪರಿಗಣಿತ ವಿಶ್ವವಿದ್ಯಾಲಯಗಳಿವೆ. ಈ ಪೈಕಿ ಕೇವಲ 26 ಸಂಸ್ಥೆಗಳು ಮಾತ್ರ ಕೆಟಗರಿ-1 ಸ್ಥಾನಮಾನವನ್ನು ಪಡೆದಿವೆ. ಈ ಮೂಲಕ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯವು ಯುಜಿಸಿಯ ಶ್ರೇಣೀಕೃತ ಸ್ವಾಯತ್ತತೆ ಚೌಕಟ್ಟಿನಡಿ ಅತ್ಯುನ್ನತ ಶೈಕ್ಷಣಿಕ ಗುಣಮಟ್ಟ ಮತ್ತು ಸಾಂಸ್ಥಿಕ ಶ್ರೇಷ್ಠತೆಯನ್ನು ಸಾಧಿಸಿದ ದೇಶದ ಪ್ರಮುಖ ಖಾಸಗಿ ಸಂಸ್ಥೆಗಳ ಸಾಲಿನಲ್ಲಿ ಸ್ಥಾನ ಪಡೆದಿದೆ ಎಂದರು .

ಈ ಮಾನ್ಯತೆ ಪಠ್ಯಕ್ರಮ ವಿನ್ಯಾಸ, ಬೋಧನೆ-ಕಲಿಕಾ ಪ್ರಕ್ರಿಯೆ, ಸಂಶೋಧನಾ ಉತ್ಪಾದಕತೆ, ಆಡಳಿತ ವ್ಯವಸ್ಥೆ, ಮೂಲಸೌಕರ್ಯ, ನಾವೀನ್ಯತೆ, ವಿದ್ಯಾರ್ಥಿ ಬೆಂಬಲ ಸೇವೆಗಳು, ಸಮುದಾಯ ತೊಡಗಿಸಿಕೊಳ್ಳುವಿಕೆ ಹಾಗೂ ಸಾಂಸ್ಥಿಕ ಮೌಲ್ಯಗಳಲ್ಲಿ ವಿಶ್ವವಿದ್ಯಾಲಯ ಸಾಧಿಸಿರುವ ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತದೆ ಎಂದರು .

ಯುಜಿಸಿ ನಿಯಮಗಳ ಪ್ರಕಾರ ಕೆಟಗರಿ-1 ವಿಶ್ವವಿದ್ಯಾಲಯಗಳಿಗೆ ಶೈಕ್ಷಣಿಕ ಮತ್ತು ಆಡಳಿತಾತ್ಮಕ ವಿಷಯಗಳಲ್ಲಿ ಹೆಚ್ಚಿನ ಸ್ವಾಯತ್ತತೆ ದೊರೆಯಲಿದೆ. ಇದರಡಿ ಯುಜಿಸಿಯ ಪೂರ್ವಾನುಮೋದನೆ ಪಡೆಯದೆ ಹೊಸ ಶೈಕ್ಷಣಿಕ ಕಾರ್ಯಕ್ರಮಗಳು, ವಿಭಾಗಗಳು, ಶಾಲೆಗಳು, ಅಧ್ಯಯನ ಕೇಂದ್ರಗಳು, ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್‌ಗಳು, ಮುಕ್ತ ಮತ್ತು ದೂರಶಿಕ್ಷಣ ಕಾರ್ಯಕ್ರಮಗಳು ಹಾಗೂ ಅಂತರಶಿಸ್ತೀಯ ಉಪಕ್ರಮಗಳನ್ನು ಆರಂಭಿಸುವ ಅವಕಾಶ ಲಭಿಸುತ್ತದೆ ಎಂದರು .

ಇದಲ್ಲದೆ, ದೇಶ-ವಿದೇಶಗಳ ಶಿಕ್ಷಣ ಸಂಸ್ಥೆಗಳೊಂದಿಗೆ ಜಂಟಿ ಸಂಶೋಧನಾ ಯೋಜನೆಗಳು, ಸಹಯೋಗದ ಶೈಕ್ಷಣಿಕ ಕಾರ್ಯಕ್ರಮಗಳು, ಅಧ್ಯಾಪಕ ಹಾಗೂ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳು, ದ್ವಿಪದವಿ ಕೋರ್ಸ್‌ಗಳು ಸೇರಿದಂತೆ ವಿವಿಧ ಅಕಾಡೆಮಿಕ್ ಸಹಭಾಗಿತ್ವಗಳನ್ನು ಮತ್ತಷ್ಟು ವಿಸ್ತರಿಸಲು ಈ ಸ್ಥಾನಮಾನ ಸಹಕಾರಿಯಾಗಲಿದೆ ಎಂದು ಕುಲಪತಿಗಳು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ಡಾ. ರೊನಾಲ್ಡ್ ನಜರೆತ್, ಉಪನ್ಯಾಸಕ ಡಾ. ದಿನೇಶ್ ನಾಯಕ್ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಚಂದ್ರಕಲಾ ನಾಯಕ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!