ಮಂಗಳೂರು: 2003ರಲ್ಲಿ ಸ್ಥಾಪನೆಯಾದ ತುಳುನಾಟಕ ಕಲಾವಿದರ ಒಕ್ಕೂಟವು 21 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ವಾರ್ಷಿಕ ತೌಳವ ಪ್ರಶಸ್ತಿ ಪ್ರದಾನ, ಹಿರಿಯ ಕಲಾವಿದರು ಹಾಗೂ ತಂತ್ರಜ್ಞರ ಸನ್ಮಾನ, ಅಶಕ್ತ ಕಲಾವಿದರಿಗೆ ಧನಸಹಾಯ ಮತ್ತು ಕೀರ್ತಿಶೇಷ ಕಲಾವಿದರ ‘ನೆಂಪು’ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ.
2026-27ನೇ ಸಾಲಿನ ತೌಳವ ಪ್ರಶಸ್ತಿ ಪ್ರದಾನ, ಹಿರಿಯ ಕಲಾವಿದರು ಹಾಗೂ ತಂತ್ರಜ್ಞರ ಸನ್ಮಾನ, ಕೀರ್ತಿಶೇಷ ಕಲಾವಿದರ ‘ನೆಂಪು’ ಕಾರ್ಯಕ್ರಮ ಮತ್ತು ಅಶಕ್ತ ಕಲಾವಿದರಿಗೆ ಗೌರವಧನ ವಿತರಣೆ ಆ.11ರಂದು ಸಂಜೆ 5 ಗಂಟೆಗೆ ಮಂಗಳೂರು ಪುರಭವನದಲ್ಲಿ ನಡೆಯಲಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಕುಮಾರ್ ಮಲ್ಲೂರು ತಿಳಿಸಿದ್ದಾರೆ.

ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2009ರಲ್ಲಿ ತುಳುನಾಟಕ ಕಲಾವಿದರ ಕ್ಷೇಮನಿಧಿ ಸ್ಥಾಪಿಸಿ, ಆರ್ಥಿಕವಾಗಿ ಅಶಕ್ತ ಕಲಾವಿದರಿಗೆ ನೆರವು ನೀಡಲಾಗುತ್ತಿದೆ. ನಾಟಕ ಕಲಾವಿದರಿಗೆ ಸಮೂಹ ವೈದ್ಯಕೀಯ ವಿಮೆ ಹಾಗೂ ಯಕ್ಷಧ್ರುವ ಪಟ್ಲ ಫೌಂಡೇಶನ್ ಸಹಯೋಗದಲ್ಲಿ 600ಕ್ಕೂ ಅಧಿಕ ಕಲಾವಿದರಿಗೆ ಅಪಘಾತ ವಿಮಾ ಸೌಲಭ್ಯ ಒದಗಿಸಲಾಗಿದೆ ಎಂದರು.
ಈ ಸಾಲಿನ ತೌಳವ ಪ್ರಶಸ್ತಿಯನ್ನು ಹಿರಿಯ ನಾಟಕಕಾರ, ನಟ, ಕಲಾ ನಿರ್ದೇಶಕ ಹಾಗೂ ಸಾಹಿತಿ ತಮ್ಮ ಲಕ್ಷ್ಮಣ ಅವರಿಗೆ ಪ್ರದಾನಿಸಲಾಗುವುದು. ಹಿರಿಯ ಕಲಾವಿದರಾದ ತಿಮ್ಮಪ್ಪ ಶೆಟ್ಟಿ ಬೋಳಾರ, ದಿನೇಶ್ ಮಾಸ್ಟರ್ ಬಿಜೈ, ನಾಗೇಶ ಸಾಲಿಯಾನ್ ಕಂಕನಾಡಿ, ಉಲ್ಲಾಸ್ ಕದ್ರಿ, ವಿಶ್ವನಾಥ ಚಿತ್ರಾಪುರ ಹಾಗೂ ಸುಜಾತ ಶಕ್ತಿನಗರ ಅವರನ್ನು ಸನ್ಮಾನಿಸಲಾಗುವುದು.

‘ನೆಂಪು’ ಕಾರ್ಯಕ್ರಮದಲ್ಲಿ ಕೀರ್ತಿಶೇಷರಾದ ಬಾಬು ಭಟ್ ಶರವು, ದಯಾನಂದ ಶರವು, ವಿ.ಜಿ. ಪಾಲ್ ಹಾಗೂ ಜೆ. ಸಸೀತಾರಾಮ ಶೆಟ್ಟಿ ಪಚ್ಚನಾಡಿ ಅವರನ್ನು ಸ್ಮರಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಉಮೇಶ್ ಮಿಜಾರ್ ಸಾರಥ್ಯದ ‘ನಮ್ಮ ಕಲಾವಿದೆರ್ ಬೆದ್ರ’ ತಂಡದಿಂದ ‘ವೈರಲ್ ವೈಶಾಲಿ’ ತುಳು ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ. ಶೆಟ್ಟಿ, ಕೋಶಾಧಿಕಾರಿ ಮೋಹನ ಕೊಪ್ಪಲ, ಉಪಾಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಮತ್ತಿತರರು ಉಪಸ್ಥಿತರಿದ್ದರು.
