ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ನೇತೃತ್ವದಲ್ಲಿ ನಡೆದ ಉದ್ಯೋಗ ಮೇಳದ ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಕುರಿಯಾಳ ಗ್ರಾಮದ ವಿಕಲಚೇತನ ಪದವೀಧರೆ ಭಾಗ್ಯಶ್ರೀ ಅವರಿಗೆ ಇದೀಗ ಖಾಸಗಿ ಕಂಪೆನಿಯಲ್ಲಿ ಉದ್ಯೋಗಾವಕಾಶ ದೊರೆತಿದೆ.
ಮೂಡಬಿದಿರೆಯ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ನಡೆಯಲಿರುವ ಆಳ್ವಾಸ್ ‘ಪ್ರಗತಿ ಉದ್ಯೋಗ ಮೇಳ’ದ ಕುರಿತು ಬಂಟ್ವಾಳದಲ್ಲಿ ಆಯೋಜಿಸಲಾಗಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಭಾಗ್ಯಶ್ರೀ ಭಾಗವಹಿಸಿದ್ದರು. ಪದವಿ ಶಿಕ್ಷಣ ಪೂರ್ಣಗೊಳಿಸಿದ್ದರೂ ಸೂಕ್ತ ಉದ್ಯೋಗ ದೊರೆಯದೆ ಮನೆಯಲ್ಲೇ ಉಳಿದಿದ್ದ ಅವರಿಗೆ ಉದ್ಯೋಗ ಮೇಳ ಹೊಸ ಅವಕಾಶದ ಬಾಗಿಲು ತೆರೆದಿದೆ.

ಉದ್ಯೋಗ ಮೇಳದ ಮೂಲಕ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಕ್ಕೆ ಆಯ್ಕೆಯಾಗಿರುವ ಭಾಗ್ಯಶ್ರೀ ಅವರು ಆಗಸ್ಟ್ 17ರಂದು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಪದವಿ ಪಡೆದ ಬಳಿಕ ಉದ್ಯೋಗ ಪಡೆಯಬೇಕೆಂಬ ಆಶಯ ಹೊಂದಿದ್ದ ಅವರಿಗೆ ಇದೀಗ ತಮ್ಮ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ದೊರೆತಿರುವುದು ಸಂತಸಕ್ಕೆ ಕಾರಣವಾಗಿದೆ.

ಉದ್ಯೋಗಾವಕಾಶ ಕಲ್ಪಿಸುವ ಪ್ರಯತ್ನ
ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, “ಭಾಗ್ಯಶ್ರೀ ಅವರಿಗೆ ಉದ್ಯೋಗ ದೊರೆತಿರುವುದು ಅತ್ಯಂತ ಸಂತಸದ ವಿಚಾರ. ಉದ್ಯೋಗ ಮೇಳದ ಮೂಲಕ ತಾಲೂಕಿನ ಯುವಜನತೆಗೆ ಉತ್ತಮ ಅವಕಾಶಗಳನ್ನು ಕಲ್ಪಿಸುವ ಉದ್ದೇಶ ಹೊಂದಿದ್ದೇವೆ. ಭಾಗ್ಯಶ್ರೀ ಅವರಂತೆ ತಾಲೂಕಿನ ಇನ್ನಷ್ಟು ಯುವಕರು ಈ ಉದ್ಯೋಗ ಮೇಳದ ಪ್ರಯೋಜನ ಪಡೆದುಕೊಂಡಿರುವ ಸಾಧ್ಯತೆಯಿದ್ದು, ಎಷ್ಟು ಮಂದಿ ಉದ್ಯೋಗ ಪಡೆದಿದ್ದಾರೆ ಎಂಬುದರ ಮಾಹಿತಿಯನ್ನು ಪಡೆದುಕೊಳ್ಳುತ್ತೇನೆ” ಎಂದು ತಿಳಿಸಿದ್ದಾರೆ.

ಸ್ಥಳೀಯ ಯುವಜನತೆಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಆಯೋಜಿಸಲಾಗುತ್ತಿರುವ ಉದ್ಯೋಗ ಮೇಳಗಳು, ಉದ್ಯೋಗಾಕಾಂಕ್ಷಿಗಳು ಹಾಗೂ ವಿವಿಧ ಕಂಪೆನಿಗಳ ನಡುವಿನ ಸಂಪರ್ಕಕ್ಕೆ ವೇದಿಕೆಯಾಗುತ್ತಿವೆ. ಪದವಿ ಸೇರಿದಂತೆ ವಿವಿಧ ವಿದ್ಯಾರ್ಹತೆ ಹೊಂದಿದ್ದರೂ ಉದ್ಯೋಗದ ಅವಕಾಶಕ್ಕಾಗಿ ಕಾಯುತ್ತಿರುವ ಯುವಜನತೆಗೆ ಇಂತಹ ಮೇಳಗಳು ನೆರವಾಗಲಿವೆ. ಜಿಲ್ಲೆಯ ಅನೇಕ ಯುವಕ ಯುವತಿಯರಿಗೆ ಈ ಉದ್ಯೋಗ ಮೇಳ ನೆರವಾಗಿದ್ದು, ಆಳ್ವಾಸ್ “ಪ್ರಗತಿ” ಉದ್ಯೋಗ ಮೇಳ ನಡೆಸಿ ಯುವ ಜನತೆಯ ಬಾಳಿಗೆ ಬೆಳಕಾದ ಮೂಡಬಿದಿರೆಯ ಆಳ್ವಾಸ್ ವಿದ್ಯಾಸಂಸ್ಥೆಗೆ ವಿಶೇಷ ಧನ್ಯವಾದ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.

