ಪೈವಳಿಕೆ ಗ್ರಾಮ ಪಂಚಾಯತ್‌ನಲ್ಲಿ ತ್ಯಾಜ್ಯ ನಿರ್ವಹಣೆ ಸಂಪೂರ್ಣ ವಿಫಲ: DYFI ಆರೋಪ

MCF ಕೇಂದ್ರಗಳಲ್ಲಿ ತ್ಯಾಜ್ಯ ರಾಶಿ; ದುರ್ವಾಸನೆ, ಸಾಂಕ್ರಾಮಿಕ ರೋಗದ ಭೀತಿ – ತಕ್ಷಣ ಕ್ರಮಕ್ಕೆ ಆಗ್ರಹ

ಪೈವಳಿಕೆ, ಜುಲೈ 23: ಪೈವಳಿಕೆ ಗ್ರಾಮ ಪಂಚಾಯತ್ ಆಡಳಿತ ಸಮಿತಿಯು ನಿರಂತರವಾಗಿ ಅವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ನಡೆಸುತ್ತಿದ್ದು, ಇದರಿಂದ ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಅಪಾಯ ಉಂಟಾಗಿದೆ ಎಂದು DYFI ಮಂಜೇಶ್ವರ ಬ್ಲೋಕ್ ಸಮಿತಿ ಆರೋಪಿಸಿದೆ.

ಮನೆಮನೆಗಳಿಂದ ಹರಿತ ಕರ್ಮ ಸೇನೆ ಸಂಗ್ರಹಿಸುವ ಪ್ಲಾಸ್ಟಿಕ್ ತ್ಯಾಜ್ಯವನ್ನು MCF ಕೇಂದ್ರಗಳಿಗೆ ತಂದು ಸುರಿಯಲಾಗುತ್ತಿದ್ದು, ಕಿಲೋಗಟ್ಟಲೆ ತ್ಯಾಜ್ಯವು MCF ಒಳಗೆ ಮತ್ತು ಹೊರಗೆ ರಾಶಿಯಾಗಿ ಬಿದ್ದಿದೆ. ಇದರ ಪರಿಣಾಮ ದುರ್ವಾಸನೆ ವ್ಯಾಪಿಸಿ, ಸಾಂಕ್ರಾಮಿಕ ಹಾಗೂ ಮಾರಕ ರೋಗಗಳು ಹರಡುವ ಭೀತಿ ನಿರ್ಮಾಣವಾಗಿದೆ ಎಂದು ಸಮಿತಿ ತಿಳಿಸಿದೆ.

UDF ನೇತೃತ್ವದ ಪಂಚಾಯತ್ ಆಡಳಿತ ಸಮಿತಿಯ ಈ ತಪ್ಪು ಧೋರಣೆಯನ್ನು ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿರುವ DYFI, ಪ್ರತಿ ತಿಂಗಳು ಸಂಗ್ರಹವಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಂಗಡಿಸಿ ಸೂಕ್ತ ಸಂಸ್ಕರಣಾ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದೆ. ಇದರಿಂದ ಹರಿತ ಕರ್ಮ ಸೇನೆಯ ಮೇಲಿನ ಕೆಲಸದ ಹೊರೆಯೂ ಕಡಿಮೆಯಾಗಲಿದೆ ಎಂದು ಹೇಳಿದೆ.

ಮಳೆಗಾಲ ಪೂರ್ವ ಶುಚಿತ್ವ ಕಾರ್ಯ ಸಂಪೂರ್ಣ ವಿಫಲವಾಗಿದ್ದು, ಈಗಾಗಲೇ ಸಾಂಕ್ರಾಮಿಕ ರೋಗಗಳು ಹರಡುತ್ತಿರುವ ಸಂದರ್ಭದಲ್ಲಿ MCF ಕೇಂದ್ರಗಳ ಸುತ್ತಮುತ್ತ ಹೆಚ್ಚಿನ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎಂದು DYFI ಎಚ್ಚರಿಸಿದೆ. ರಾಜ್ಯ ಸರ್ಕಾರ ಘೋಷಿಸಿರುವ ‘ಡ್ರೈ ಡೇ’ ಕಾರ್ಯಕ್ರಮವೂ ಕೇವಲ ಜಾಹೀರಾತಿನ ಘೋಷಣೆಯಾಗಿ ಉಳಿದಿದೆ ಎಂದು ಟೀಕಿಸಿದೆ.

ಪಂಚಾಯತ್ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ MCF ಕೇಂದ್ರಗಳಲ್ಲಿ ರಾಶಿಯಾಗಿರುವ ತ್ಯಾಜ್ಯವನ್ನು ತೆರವುಗೊಳಿಸಿ, ವೈಜ್ಞಾನಿಕ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಇಲ್ಲವಾದಲ್ಲಿ ತೀವ್ರ ಜನಾಂದೋಲನ ಹಮ್ಮಿಕೊಳ್ಳಲಾಗುವುದು ಎಂದು DYFI ಪಮಂಜೇಶ್ವರ ಬ್ಲೋಕ್ ಸಮಿತಿ ಎಚ್ಚರಿಕೆ ನೀಡಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!