ಕಾಸರಗೋಡು: ಮಾದಕ ವಸ್ತುಗಳ ಮಾರಾಟ ಮತ್ತು ಸಾಗಾಟವನ್ನು ಮಟ್ಟಹಾಕುವ ನಿಟ್ಟಿನಲ್ಲಿ ಕಾಸರಗೋಡು ಪೊಲೀಸರು ಮತ್ತು ಡಾನ್ಸಾಫ್ ತಂಡ ಜಾರಿಗೆ ತಂದಿರುವ ‘ಆಪರೇಷನ್ ತೂಫಾನ್’ ಕಾರ್ಯಾಚರಣೆಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ.

ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಸಿದ ಪ್ರತ್ಯೇಕ ದಿಢೀರ್ ದಾಳಿಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಎಂಡಿಎಂಎ ವಶಪಡಿಸಿಕೊಂಡು, ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಕೃತ್ಯಕ್ಕೆ ಬಳಸುತ್ತಿದ್ದ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.

ಗುರುವಾರ ರಾತ್ರಿ 10:30ರ ಸುಮಾರಿಗೆ ಸಂತೋಷ್ ನಗರದಲ್ಲಿ ವಿದ್ಯಾನಗರ ಎಸ್‌ಐ ಅನೂಪ್ ನೇತೃತ್ವದಲ್ಲಿ ತಪಾಸಣೆ ನಡೆಸಲಾಗಿದೆ. ಈ ವೇಳೆ ಸಂಶಯಾಸ್ಪದ ರೀತಿಯಲ್ಲಿ ನಿಲ್ಲಿಸಲಾಗಿದ್ದ ಕಾರನ್ನು ತಪಾಸಣೆಗೊಳಪಡಿಸಿದಾಗ 18 ಗ್ರಾಂ ಎಂಡಿಎಂಎ ಪತ್ತೆಯಾಗಿದ್ದು, ಅದನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.ಈ ಸಂಬಂಧ ಮೊಹಮ್ಮದ್ ಅನ್ಶೀದ್ (26), ಸಂತೋಷ್ ನಗರ. ಸಿ. ಅಬ್ದುಲ್ ಖಾದರ್ (27), , ಚೆರ್ಕಳ. ಎಂಬಿವರನ್ನು ವಶಕ್ಕೆ ತೆಗೆಯಲಾಗಿದೆ.

ಗುರುವಾರ ಸಂಜೆ 4:00 ಗಂಟೆಗೆ ಚೆರ್ಕಳ ಕುಂಜಿಕರ ಪ್ರದೇಶದಲ್ಲಿ ವಿದ್ಯಾನಗರ ಎಸ್‌ಐ ವಿಜಯನ್ ಮೇಲತ್ ನೇತೃತ್ವದಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ 2.730 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಪಿ. ಉಣ್ಣಿಕೃಷ್ಣ (26) ಎಂಬಾತನನ್ನು ಸೆರೆ ಹಿಡಿಯಲಾಗಿದೆ.

ಯುವಜನತೆಯನ್ನು ಗುರಿಯಾಗಿಸಿಕೊಂಡು ಮಾದಕ ವಸ್ತುಗಳನ್ನು ಪೂರೈಸುತ್ತಿರುವ ಜಾಲದ ಬೆನ್ನುಬಿದ್ದಿರುವ ಪೊಲೀಸರು, ‘ಆಪರೇಷನ್ ತೂಫಾನ್’ ಕಾರ್ಯಾಚರಣೆಯನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

