ಉಡುಪಿ: ಒಂದು ತಿಂಗಳ ಹೆಣ್ಣು ಮಗುವನ್ನು ಅಕ್ರಮವಾಗಿ ಮಾರಾಟ ಮಾಡಿದ ಆರೋಪಕ್ಕೆ ಸಂಬಂಧಿಸಿ ಉಡುಪಿ ಮಹಿಳಾ ಪೊಲೀಸ್ ಠಾಣೆ ಪೊಲೀಸರು ವೈದ್ಯರು ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಉಡುಪಿ ಕಾಮತ್ ನರ್ಸಿಂಗ್ ಹೋಮ್ನ ವೈದ್ಯ ಡಾ. ಕೆ. ಸುರೇಂದ್ರ ಕಾಮತ್ (76), ಸಂತೆಕಟ್ಟೆ ನೇಜಾರಿನ ಎಸ್. ಪ್ರಕಾಶ್ (50), ಕಾರ್ಕಳದ ಸೂಡ ನಿವಾಸಿ ಸಂಪತ್ (22) ಹಾಗೂ ನಂದಳಿಕೆಯ ಸುಪ್ರೀತಿ (22) ಎಂದು ಗುರುತಿಸಲಾಗಿದೆ.
ಜೂನ್ 19ರಂದು ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ವಲಯ ಮೇಲ್ವಿಚಾರಕರು ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದು, ಸಂತೆಕಟ್ಟೆ ನೇಜಾರಿನ ದಂಪತಿ ಪ್ರಕಾಶ್ ಮತ್ತು ಪೂರ್ಣಿಮಾ ಅವರು ಯಾವುದೇ ಕಾನೂನುಬದ್ಧ ದತ್ತು ಪ್ರಕ್ರಿಯೆ ಇಲ್ಲದೆ ಸುಮಾರು ಒಂದು ತಿಂಗಳ ಹೆಣ್ಣು ಮಗುವನ್ನು ಸಾಕುತ್ತಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.
ಇದನ್ನಾಧರಿಸಿ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ತನಿಖೆಯಲ್ಲಿ, ಮದುವೆಯಾಗಿ 11 ವರ್ಷಗಳಾದರೂ ಮಕ್ಕಳಾಗದ ಕಾರಣ ಪ್ರಕಾಶ್ ಮತ್ತು ಪೂರ್ಣಿಮಾ ಅವರು ಕಾಮತ್ ನರ್ಸಿಂಗ್ ಹೋಮ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಆಸ್ಪತ್ರೆಯಲ್ಲಿ ಮಗು ಇರುವ ಮಾಹಿತಿ ತಿಳಿದ ದಂಪತಿ ವೈದ್ಯ ಡಾ. ಸುರೇಂದ್ರ ಕಾಮತ್ ಅವರನ್ನು ಸಂಪರ್ಕಿಸಿ ಮಗು ನೀಡುವಂತೆ ಕೋರಿದ್ದರು ಎನ್ನಲಾಗಿದೆ. ಬಳಿಕ ಹೆಣ್ಣು ಮಗುವನ್ನು ಹಸ್ತಾಂತರಿಸಲಾಗಿದ್ದು, ಜನನ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಟ್ಟಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆ.
ಆರೋಪಿಗಳು ಅಕ್ರಮ ಲಾಭ ಪಡೆಯುವ ಉದ್ದೇಶದಿಂದ ಒಳಸಂಚು ರೂಪಿಸಿ, ಮಗುವಿನ ಜನನ ಮತ್ತು ಪೋಷಕರ ವಿವರಗಳಿಗೆ ಸಂಬಂಧಿಸಿದ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಮಗುವನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಉಡುಪಿ ಮಹಿಳಾ ಠಾಣೆ ಪೊಲೀಸರು ತನಿಖೆ ನಡೆಸಿ ಮೊದಲಿಗೆ ಡಾ. ಸುರೇಂದ್ರ ಕಾಮತ್ ಹಾಗೂ ಪ್ರಕಾಶ್ ಅವರನ್ನು ಬಂಧಿಸಿದ್ದು, ಬಳಿಕ ಮಗು ಹಸ್ತಾಂತರದಲ್ಲಿ ಭಾಗಿಯಾಗಿದ್ದ ಆರೋಪದಡಿ ಸಂಪತ್ ಮತ್ತು ಸುಪ್ರೀತಿ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.