ಉಡುಪಿ: ಉದ್ಯಾವರ ಪಾಪನಾಶಿನಿ ಸೇತುವೆಯಿಂದ ನದಿಗೆ ಹಾರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ನಡೆದಿದೆ.
ಮೃತರನ್ನು ಉದ್ಯಾವರ ಪಿತ್ರೋಡಿ ನಿವಾಸಿ ರಮೇಶ್ ಹಾಗೂ ಪ್ರಮೋದಿನಿ ಶೆಟ್ಟಿ ದಂಪತಿಯ ಪುತ್ರ ಹರ್ಷಿತ್ ಶೆಟ್ಟಿ (28) ಎಂದು ಗುರುತಿಸಲಾಗಿದೆ.
ಮಂಗಳವಾರ ಮುಂಜಾನೆ 5 ಗಂಟೆ ಸುಮಾರಿಗೆ ಕ್ರಿಕೆಟ್ ಆಡಲು ಹೋಗುವುದಾಗಿ ಮನೆಯಿಂದ ತೆರಳಿದ್ದ ಹರ್ಷಿತ್ ಬಳಿಕ ಮನೆಗೆ ವಾಪಸ್ಸಾಗಿರಲಿಲ್ಲ. ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ದ್ವಿಚಕ್ರ ವಾಹನವು ಉದ್ಯಾವರ ಪಾಪನಾಶಿನಿ ಸೇತುವೆಯ ಮೇಲೆ ಪತ್ತೆಯಾಗಿತ್ತು.
ಇದರಿಂದ ಅನುಮಾನಗೊಂಡ ಸ್ಥಳೀಯರು ಹಾಗೂ ಮುಳುಗುತಜ್ಞ ಈಶ್ವರ ಮಲ್ಪೆ ನೇತೃತ್ವದ ತಂಡ ನದಿಯಲ್ಲಿ ಹುಡುಕಾಟ ನಡೆಸಿದ್ದು, ಸಂಜೆಯ ವೇಳೆಗೆ ಹರ್ಷಿತ್ ಅವರ ಮೃತದೇಹ ಪತ್ತೆಯಾಗಿದೆ.
ಹರ್ಷಿತ್ ಮಲ್ಪೆಯ ಸೊಸೈಟಿಯೊಂದರಲ್ಲಿ ಉದ್ಯೋಗಿಯಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.