ಮಂಗಳೂರು: ಕಳೆದ ವರ್ಷ ಮಂಗಳೂರು ಸಮೀಪದ ಮಂಜನಾಡಿಯಲ್ಲಿ ಸಂಭವಿಸಿದ ಭೀಕರ ಗುಡ್ಡ ಕುಸಿತದಲ್ಲಿ ತನ್ನ ಇಡೀ ಪ್ರಪಂಚವನ್ನೇ ಕಳೆದುಕೊಂಡು, ಅತೀವ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿರುವ ನೊಂದ ಮಹಿಳೆ ಶ್ರೀಮತಿ ಅಶ್ವಿನಿ ಅವರ ಮನೆಗೆ ಉಡುಪಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಇಂದು ಖುದ್ದಾಗಿ ಭೇಟಿ ನೀಡಿ ಸಾಂತ್ವನ ಹೇಳಿದರು. ಕರುಳು ಹಿಂಡುವ ಈ ದುರಂತದ ಬಳಿಕ ಚಿಂತಾಜನಕ ಪರಿಸ್ಥಿತಿಯಲ್ಲಿರುವ ಕುಟುಂಬಕ್ಕೆ ವೈಯಕ್ತಿಕವಾಗಿ ಹಾಗೂ ಸರ್ಕಾರದ ಮಟ್ಟದಲ್ಲಿ ಸಂಪೂರ್ಣ ಬೆಂಬಲವಾಗಿ ನಿಲ್ಲುವ ಭರವಸೆಯನ್ನು ಶಾಸಕರು ತುಂಬಿದರು.
ಕಳೆದ ವರ್ಷ ಸುರಿದ ಭಾರಿ ಮಳೆಯಿಂದಾಗಿ ಮಂಜನಾಡಿಯಲ್ಲಿ ಸಂಭವಿಸಿದ ಗುಡ್ಡ ಕುಸಿತವು ಅಶ್ವಿನಿ ಅವರ ಬದುಕನ್ನೇ ನುಚ್ಚುನೂರು ಮಾಡಿತ್ತು. ಈ ಭೀಕರ ದುರಂತದಲ್ಲಿ ಅಶ್ವಿನಿ ಅವರು ತಮ್ಮಿಬ್ಬರು ಮುದ್ದಾದ ಮಕ್ಕಳು ಹಾಗೂ ಅತ್ತೆಯನ್ನು ಕಳೆದುಕೊಂಡಿದ್ದರು. ಕೇವಲ ಪ್ರಾಣಹಾನಿಯಷ್ಟೇ ಅಲ್ಲದೆ, ಪ್ರಕೃತಿಯ ವಿಕೋಪಕ್ಕೆ ಅಶ್ವಿನಿ ಅವರು ತಮ್ಮ ಎರಡೂ ಕಾಲುಗಳನ್ನು ಕಳೆದುಕೊಂಡರೆ, ಅವರ ಮಾವ ಒಂದು ಕಾಲನ್ನು ಕಳೆದುಕೊಂಡು ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ. ಕಣ್ಣ ಮುಂದೆಯೇ ಇಡೀ ಕುಟುಂಬ ಹಾಗೂ ಕಟ್ಟಿದ ಮನೆ ಮಣ್ಣುಪಾಲಾಗಿ, ಇಂದು ಎರಡು ಕಾಲುಗಳಿಲ್ಲದೆ ದೈನಂದಿನ ಜೀವನ ನಡೆಸಲೂ ಪರದಾಡುತ್ತಿರುವ ಅಶ್ವಿನಿ ಅವರ ಪರಿಸ್ಥಿತಿ ಕಂಡು ಶಾಸಕ ಕಿಶೋರ್ ಕುಮಾರ್ ಅವರು ತೀವ್ರ ಭಾವುಕರಾದರು.
ಅಶ್ವಿನಿ ಅವರ ಕಣ್ಣೀರು ಒರೆಸಿ ಧೈರ್ಯ ತುಂಬಿದ ಶಾಸಕರು, “ನೀವು ಒಂಟಿಯಲ್ಲ, ಈ ಕಷ್ಟದ ಸಮಯದಲ್ಲಿ ನಿಮ್ಮ ಕುಟುಂಬದ ಜೊತೆಗೆ ನಾವಿದ್ದೇವೆ. ನೀವು ಕಳೆದುಕೊಂಡಿರುವ ಜೀವಗಳನ್ನು ಮರಳಿ ತರಲು ಸಾಧ್ಯವಿಲ್ಲ, ಆದರೆ ನಿಮ್ಮ ಮುಂದಿನ ಬದುಕಿಗೆ ಆಸರೆಯಾಗಿ ನಿಲ್ಲುವ ಜವಾಬ್ದಾರಿ ನಮ್ಮದಾಗಿದೆ. ನಿಮ್ಮ ಬದುಕನ್ನು ಕಟ್ಟಿಕೊಳ್ಳಲು ಹಾಗೂ ಸರ್ಕಾರದಿಂದ ನಿಮಗೆ ಸಿಗಬೇಕಾದ ಹಕ್ಕು, ಸೂಕ್ತ ಪರಿಹಾರ ಮತ್ತು ಪುನರ್ವಸತಿಗಾಗಿ ನಡೆಯುವ ಪ್ರತಿಯೊಂದು ಹೋರಾಟದಲ್ಲೂ ನಾನು ನಿಮ್ಮ ಜೊತೆಗೆ ನಿಲ್ಲುತ್ತೇನೆ” ಎಂದು ಆಶ್ವಾಸನೆ ನೀಡಿದರು.
ಇದೇ ಸಂದರ್ಭದಲ್ಲಿ, ಅಶ್ವಿನಿ ಅವರ ವೈದ್ಯಕೀಯ ವೆಚ್ಚಗಳು ಹಾಗೂ ಪ್ರಸ್ತುತ ಜೀವನ ನಿರ್ವಹಣೆಯ ಕುರಿತು ಮಾಹಿತಿ ಪಡೆದುಕೊಂಡ ಶಾಸಕರು, ಜಿಲ್ಲಾಡಳಿತದಿಂದ ಹಾಗೂ ಸರ್ಕಾರದ ಮಟ್ಟದಿಂದ ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ತುರ್ತಾಗಿ ಒದಗಿಸಿಕೊಡಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ತಕ್ಷಣವೇ ಮಾತನಾಡಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಶ್ರೀ ಜಗದೀಶ್ ಕುವತ್ತಬೈಲ್ , ಜಿಲ್ಲೆಯ ಉಪಾಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ದಯಾನಂದ ತೊಕ್ಕೊಟ್ಟು, ಶ್ರೀ ಮೋಹನ್ ರಾಜ್ ಕೆ. ಆರ್ , ಯುವಮೋರ್ಚಾ ಅಧ್ಯಕ್ಷರಾದ ಶ್ರೀ ಮುರಳಿ ಕೊಣಾಜೆ, ರೈತಮೋರ್ಚಾ ಅಧ್ಯಕ್ಷರಾದ ಶ್ರೀ ಪದ್ಮನಾಭ ಶೆಟ್ಟಿ, ಮಂಡಲದ ಕೋಶಾದಿಕಾರಿ ಸುಮಲತಾ ಕೊಣಾಜೆ ಶಕ್ತಿ ಕೇಂದ್ರ ಪ್ರಮುಖ್ ಸುಧಾಕರ ಗಟ್ಟಿ ಮತ್ತಿತರರು.