ಮಂಗಳೂರು, ಜೂನ್ 25: ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು 9 ಮತ್ತು 10ನೇ ತರಗತಿಗಳಿಗೂ ಬೋಧನೆ ಮಾಡಬೇಕು ಎಂಬ ಕರ್ನಾಟಕ ಸಾಮಾನ್ಯ ಸೇವೆಗಳು (ಪದವಿ ಪೂರ್ವ ಶಿಕ್ಷಣ) ನೇಮಕಾತಿ ನಿಯಮಗಳ ಕರಡು ತಿದ್ದುಪಡಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ವಿರೋಧಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಡಾ. ನವೀನ್ ಶೆಟ್ಟಿ ಕೆ., ಎಸ್ಇಪಿ ಜಾರಿಯ ಹಂತದಲ್ಲಿರುವ ಸಂದರ್ಭದಲ್ಲಿ ಇಂತಹ ನಿಯಮ ಬದಲಾವಣೆಯ ಅಗತ್ಯವಿಲ್ಲ. ಶಿಕ್ಷಣ ತಜ್ಞರು ಹಾಗೂ ಬೋಧಕರ ಸಮಿತಿಯಿಂದ ಸಮಗ್ರ ಚರ್ಚೆ ನಡೆಸಿದ ಬಳಿಕವೇ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸಂಘದ ಜಂಟಿ ಕಾರ್ಯದರ್ಶಿ ವಿಠಲ್ ಮಾತನಾಡಿ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಶಿಕ್ಷಣದ ಬೋಧನಾ ವಿಧಾನಗಳು ವಿಭಿನ್ನವಾಗಿದ್ದು, ಉಪನ್ಯಾಸಕರನ್ನು ಎರಡೂ ಹಂತಗಳಲ್ಲಿ ಬಳಸುವುದರಿಂದ ಶಿಕ್ಷಣದ ಗುಣಮಟ್ಟಕ್ಕೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಬಡ್ತಿ ಪಡೆದ ಉಪನ್ಯಾಸಕರನ್ನು ಮತ್ತೆ 9 ಮತ್ತು 10ನೇ ತರಗತಿಗಳಿಗೆ ನಿಯೋಜಿಸುವುದು ಬಡ್ತಿಯ ಉದ್ದೇಶವನ್ನೇ ಹಾಳು ಮಾಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ಹರಿಪ್ರಕಾಶ್, ಶೀನಪ್ಪ, ಸಚಿತ್ ಸುವರ್ಣ ಹಾಗೂ ಸೀಮಾ ಉಪಸ್ಥಿತರಿದ್ದರು.