ಮಂಗಳೂರು: ಚಿತ್ರಕಲಾ ಕ್ಷೇತ್ರದಲ್ಲಿ ಅಪೂರ್ವ ಸಾಧನೆಗೈದು ರಾಜ್ಯದಾದ್ಯಂತ ಗುರುತಿಸಿಕೊಂಡಿರುವ ಹಿರಿಯ ಕಲಾವಿದ ಬಿ.ಕೆ. ಮಾಧವ ರಾವ್ ಅವರು ಕನ್ನಡ ಭವನದ ಪ್ರತಿಷ್ಠಿತ ‘ಕನ್ನಡ ಪಯಸ್ವಿನಿ ಚಿತ್ರ ಕಲಾರತ್ನ ಅಚೀವ್ಮೆಂಟ್ ಅವಾರ್ಡ್–2026’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಜುಲೈ 26ರಂದು ಕನ್ನಡ ಭವನದಲ್ಲಿ ನಡೆಯಲಿರುವ ರಜತ ಸಂಭ್ರಮ ಸಮಾರೋಪ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿರುವ ‘ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ’ದಲ್ಲಿ ಅವರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಹಾಗೂ ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ಕೆ. ವಾಮನ್ ರಾವ್ ಬೇಕಲ್ ಅವರು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಿತ್ರಕಲಾ ಕ್ಷೇತ್ರಕ್ಕೆ ಬಿ.ಕೆ. ಮಾದವ ರಾವ್ ಅವರು ನೀಡಿರುವ ವಿಶಿಷ್ಟ ಕೊಡುಗೆ, ಸೃಜನಶೀಲತೆ ಹಾಗೂ ದೀರ್ಘಕಾಲದ ಕಲಾಸೇವೆಯನ್ನು ಪರಿಗಣಿಸಿ ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ. ಕನ್ನಡ ನಾಡು-ನುಡಿ, ಕಲೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಶ್ರಮಿಸುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ತಿಳಿಸಲಾಗಿದೆ.