ಮೂಡುಬಿದಿರೆ, ಜೂನ್ 25: ನಿನ್ನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅವರ ದಫನ ಕ್ರಿಯೆಯು ಇಂದು ಮೂಡುಬಿದಿರೆ ಸಮೀಪದ ಕಾಶಿಪಟ್ಣದ ದಾರುನ್ನೂರ್ ಎಜುಕೇಶನ್ ಸೆಂಟರ್ ಆವರಣದಲ್ಲಿ ನೆರವೇರಿತು.
ಕಾಸರಗೋಡಿನಿಂದ ಇಂದು ಮುಂಜಾನೆ ಮೃತದೇಹವನ್ನು ದಾರುನ್ನೂರ್ ಎಜುಕೇಶನ್ ಸೆಂಟರ್ಗೆ ತರಲಾಗಿದ್ದು, ಧಾರ್ಮಿಕ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ಬಳಿಕ ಅಂತಿಮ ದಫನ ಕಾರ್ಯ ನಡೆಸಲಾಯಿತು.
ಖಾಝಿಯವರ ಅಂತಿಮ ದರ್ಶನ ಮತ್ತು ದಫನ ಕಾರ್ಯಕ್ರಮದಲ್ಲಿ ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್, ಪ್ರಮುಖ ಉಲಮಾಗಳು, ಉಮರಾಗಳು ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತರು ಮತ್ತು ಸಾರ್ವಜನಿಕರು ಭಾಗವಹಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅವರ ಅಗಲಿಕೆಯಿಂದ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ವಲಯಗಳಲ್ಲಿ ಶೋಕದ ಛಾಯೆ ಆವರಿಸಿದೆ.