ವೆನೆಜುವೆಲಾದಲ್ಲಿ ಅವಳಿ ಭೂಕಂಪ: 32 ಸಾವು, 700ಕ್ಕೂ ಹೆಚ್ಚು ಮಂದಿಗೆ ಗಾಯ

ಮೆಕ್ಸಿಕೊ/ಕ್ಯಾರಕಸ್: ವೆನೆಜುವೆಲಾ ಕರಾವಳಿಯಲ್ಲಿ ಸಂಭವಿಸಿದ ಎರಡು ಪ್ರಬಲ ಭೂಕಂಪಗಳು ಭಾರೀ ಅನಾಹುತಕ್ಕೆ ಕಾರಣವಾಗಿದ್ದು, ಕನಿಷ್ಠ 32 ಮಂದಿ ಮೃತಪಟ್ಟಿದ್ದಾರೆ. 700ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅಧ್ಯಕ್ಷೆ ಡೆಲ್ಸಿ ರಾಡ್ರಿಗಸ್ ತಿಳಿಸಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ದೇಶದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ಈಗಾಗಲೇ ರಾಜಕೀಯ ಮತ್ತು ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿರುವ ವೆನೆಜುವೆಲಾಕ್ಕೆ ಭೂಕಂಪ ಮತ್ತೊಂದು ದೊಡ್ಡ ಹೊಡೆತ ನೀಡಿದೆ. ಶತಮಾನದಲ್ಲೇ ಅತ್ಯಂತ ಭಾರೀ ಹಾನಿ ಸಂಭವಿಸಿದೆ ಎಂದು ಅಧ್ಯಕ್ಷರು ಹೇಳಿದ್ದಾರೆ. ಸಾವು-ನೋವಿನ ಅಂಕಿ-ಅಂಶಗಳು ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜಧಾನಿ ಕ್ಯಾರಕಸ್‌ನಲ್ಲಿ ಅನೇಕ ಬಹುಮಹಡಿ ಕಟ್ಟಡಗಳು ಕುಸಿದಿದ್ದು, ಭಯಭೀತರಾದ ಜನರು ಬೀದಿಗಳಿಗೆ ಧಾವಿಸಿದ್ದಾರೆ. ಅವಶೇಷಗಳಡಿ ಸಿಲುಕಿದ ಹಲವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಗುವೈರಾ ನಗರ ಸೇರಿದಂತೆ ಹಲವು ಪ್ರದೇಶಗಳಿಂದ ಇನ್ನೂ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ.

ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ವೈದ್ಯರು ಹಾಗೂ ನರ್ಸ್‌ಗಳ ರಜೆಗಳನ್ನು ರದ್ದುಗೊಳಿಸಿ ತಕ್ಷಣ ಕರ್ತವ್ಯಕ್ಕೆ ಹಾಜರಾಗುವಂತೆ ಸರ್ಕಾರ ಸೂಚಿಸಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ.

ಕ್ಯಾರಕಸ್ ಮೇಯರ್ ಮಾಹಿತಿ ಪ್ರಕಾರ, ಎರಡು ಕಟ್ಟಡಗಳು ಕುಸಿದ ಪರಿಣಾಮ ಮೂವರು ಮೃತಪಟ್ಟಿದ್ದಾರೆ. ಅಮೆರಿಕದ ಭೂಕಂಪ ತಜ್ಞರು ಈ ಭೂಕಂಪವನ್ನು ಅತ್ಯಂತ ವಿನಾಶಕಾರಿ ಎಂದು ಬಣ್ಣಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊಗಳಲ್ಲಿ ಭಾರೀ ನಾಶದ ದೃಶ್ಯಗಳು ಕಂಡುಬಂದಿವೆ. ಹಲವು ಎತ್ತರದ ಕಟ್ಟಡಗಳು ನೆಲಸಮವಾಗಿದ್ದು, ಉತ್ತರ ಕ್ಯಾರಕಸ್‌ನ ಪ್ರಮುಖ ಹೋಟೆಲ್ ಕೂಡ ಅವಶೇಷಗಳಾಗಿ ಮಾರ್ಪಟ್ಟಿದೆ. ಜನರು ಭಯಭೀತರಾಗಿ ಸಿಮೊನ್ ಬೊಲಿವರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಧಾವಿಸುತ್ತಿರುವ ದೃಶ್ಯಗಳು ವೈರಲ್ ಆಗಿವೆ.

ಸ್ಥಳೀಯ ಕಾಲಮಾನ ಪ್ರಕಾರ ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಮೊದಲಿಗೆ 7.2 ತೀವ್ರತೆಯ ಭೂಕಂಪ ಸಂಭವಿಸಿದೆ. ಕೇವಲ ಒಂದು ನಿಮಿಷದ ಅಂತರದಲ್ಲಿ 7.5 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದೆ. 1900ರ ನಂತರ ವೆನೆಜುವೆಲಾದಲ್ಲಿ ದಾಖಲಾಗಿರುವ ಅತ್ಯಂತ ಪ್ರಬಲ ಭೂಕಂಪ ಇದಾಗಿದೆ ಎಂದು ಅಮೆರಿಕ ಭೂಕಂಪ ಮೇಲ್ವಿಚಾರಣಾ ಕೇಂದ್ರ ತಿಳಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!